high level committee 
ರಾಜ್ಯ

ಪಡಿತರ ಅಕ್ಕಿ ಅಕ್ರಮ ತನಿಖೆಗೆ ಹರ್ಷ ಗುಪ್ತ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚನೆ

ಪ್ರಮುಖ ಮುಖ್ಯಾಂಶಗಳು

  • ಲೋಕಾಯುಕ್ತ ದಾಖಲಿಸಿಕೊಂಡಿದ್ದ ಸುಮೋಟೊ ಪ್ರಕರಣ
  • ಸಾವಿರ ಕ್ವಿಂಟಲ್ ಪಡಿತರ ಪಿಡಿಎಸ್ ಅಕ್ಕಿ ಜಪ್ತಿ
ಬೆಂಗಳೂರು: ಪಡಿತರ ಅಕ್ಕಿ (ಪಿಡಿಎಸ್) ಕಾಳಸಂತೆಗೆ ಸಾಗಣೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟದ ಕುರಿತು ಲೋಕಾಯುಕ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ನೇತೃತ್ವದಲ್ಲಿ ಇತ್ತೀಚೆಗೆ  ದಾಳಿ ನಡೆಸಿ ದಾಖಲಿಸಿಕೊಂಡಿದ್ದ ಸುಮೊಟೋ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದಾರೆ. 
ಆಡಳಿತ ಸುಧಾರಣೆಗಳ ಇಲಾಖೆ (ಡಿಪಿಎಆರ್) ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಅಧ್ಯಕ್ಷರಾಗಿದ್ದು, ಕರ್ನಾಟಕ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ .ಕೆ. ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ.ಕನಗವಲ್ಲಿ ಸದಸ್ಯರಾಗಿದ್ದಾರೆ. ಪಡಿತರ ಅಕ್ಕಿ ವಿತರಣೆ ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆ ತರಲು, ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಸ್‌ಸಿಎ್ಸಿ) ವಿವಿಧ ಸಗಟು ಗೋದಾಮುಗಳು ಹಾಗೂ ಟಿಎಪಿಎಂಸಿಎಸ್ ಗೋದಾಮುಗಳ ಮೇಲೆ ಜೂನ್ 12 ರಂದು 27 ತಂಡಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದವು. ಈ ವೇಳೆ ಕೋಟ್ಯಂತರ ರೂ.ಮೌಲ್ಯದ 1 ಸಾವಿರ ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದರು.
ಪಡಿತರದಾರರಿಗೆ ಸೇರಿದ ಅಕ್ಕಿ ಸಾಗಣೆ ಮತ್ತು ವಿತರಣೆಯಲ್ಲಿ ಹಲವು ಅಕ್ರಮ ಹಾಗೂ ನಿಯಮ ಉಲ್ಲಂಸಿರುವುದು ಪತ್ತೆಯಾಗಿದ್ದವು. ತನಿಖಾ ತಂಡಗಳ ವರದಿಗಳನ್ನು ಪರಿಶೀಲಿಸಿದ ಬಳಿಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಇಲಾಖೆಯ ಆಯುಕ್ತರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮಹಾಪ್ರಬಂಧಕರು ಸೇರಿ ಹಲವು ಹಿರಿಯ ಅಧಿಕಾರಿಗಳನ್ನು ಲೋಕಾಯುಕ್ತವು ವೈಯಕ್ತಿಕವಾಗಿ ಹಾಜರಾಗುವಂತೆ ಸೂಚಿಸಿ ಜುಲೈ 3 ರಂದು ಸಭೆ ನಡೆಸಿ ವಿಚಾರಣೆ ನಡೆಸಿತು.
ವಿಚಾರಣೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ದುರ್ಬಳಕೆ, ಆಡಳಿತ ವೈಫಲ್ಯ, ಸರ್ಕಾರಕ್ಕೆ ಉಂಟಾಗುತ್ತಿರುವ ಆರ್ಥಿಕ ನಷ್ಟ ಹಾಗೂ ಅರ್ಹ ಫಲಾನುಭವಿಗಳಿಗೆ ಅಗತ್ಯ ಆಹಾರಧಾನ್ಯಗಳು ಸಮರ್ಪಕವಾಗಿ ತಲುಪದಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ದೀರ್ಘಕಾಲಿನ ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿ ರಚಿಸುವ ನಿರ್ಧಾರ ಕೈಗೊಂಡಿದ್ದಾರೆ.
ಸಮಿತಿ ಕಾರ್ಯವೇನು:
ತನಿಖೆ ವೇಳೆ ಸಮಿತಿಯು ಪ್ರಾಥಮಿಕವಾಗಿ ಪತ್ತೆಯಾದ ಅಕ್ರಮಗಳು, ಆಹಾರ ಇಲಾಖೆ ಆಡಳಿತ ವೈಫಲ್ಯ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರುವ ಲೋಪದೋಷಗಳ ಬಗ್ಗೆ ಸಮಗ್ರ ಪರಿಶೀಲಿಸಲಿದೆ. ಅಲ್ಲದೆ ಇಂತಹ ಅಕ್ರಮಗಳು ಮರುಕಳಿಸದಂತೆ ತಡೆಗಟ್ಟುವ ಕ್ರಮಗಳು, ಶಿಸ್ತು ಕ್ರಮ, ಆಡಳಿತಾತ್ಮಕ ಸುಧಾರಣೆ ಹಾಗೂ ಪಿಡಿಎಸ್ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ಅಗತ್ಯ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಸಮಿತಿಯು ತನ್ನ ವರದಿಯನ್ನು 2026ರ ಆಗಸ್ಟ್ 20ರೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಈ ವರದಿ ಆಧರಿಸಿ ಪಡಿತರ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಲೋಕಾ ಅಭಿಪ್ರಾಯ ವ್ಯಕ್ತಪಡಿಸಿದೆ.