ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ದೂರು ನೀಡಿದ್ದಾಳೆ ಎಂಬ ಕಾರಣಕ್ಕೆ ನಿಯಮಬಾಹಿರವಾಗಿ ಪತಿಯನ್ನು ಬಂಧಿಸುವ ಪೊಲೀಸರ ಪ್ರವೃತ್ತಿ ಸರಿಯಲ್ಲ ಎಂದು ಹೈಕೋರ್ಟ್ ತರಾಟೆಗೆ ತಗೆದುಕೊಂಡಿದೆ.
ತಮ್ಮವಿರುದ್ಧದ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ರಾಮಕೃಷ್ಣ ರಾಜು ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಪರಾಧ ನಡೆದಿದ್ದರೆ, ಕಾನೂನು ಪ್ರಕಾರ ಕೈಗೊಳ್ಳಿ, ಅದರ ಬದಲಿಗೆ ದೂರು ದಾಖಲಾಗಿದೆ ಎಂಬ ಕಾರಣಕ್ಕೆ ನಿಯಮ ಮೀರುವಂತಿಲ್ಲ ಎಂದು ಪೊಲೀಸರಿಗೆ ಎಚ್ಚರಿಸಿದೆ. ಅರ್ಜಿದಾರರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಬಾಗಲೂರು ಪೊಲೀಸ್ ಠಾಣೆಯಲ್ಲಿದ್ದ ಪ್ರಕರಣದ ತನಿಖೆಗೆ ತಡೆ ನೀಡಿದ್ದು, ಕಾನೂನು ಮೀರಿ ಕ್ರಮ ಕೈಗೊಂಡ ತನಿಖಾಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸಿ 12 ವಾರಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ವಾರಂಟ್ ನೀಡದೆ ಪತಿಯನ್ನು ಬಂಧಿಸಿದ್ದ ತನಿಖಾಧಿಕಾರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಪತ್ನಿ ದೂರು ನೀಡಿದ್ದಾಳೆ ಎಂದು ನೇರವಾಗಿ ಪತಿಯನ್ನು ಬಂಧಿಸಲಾಗುತ್ತಿದೆ. ದೂರು ನೀಡಿದ ತಕ್ಷಣ ಯಾರನ್ನಾದರೂ ಜೈಲಿಗೆ ಕಳಿಸುವುದು ಸರಿಯಲ್ಲ. ಪೊಲೀಸರು ನಾಗರಿಕರ ಜೀವನದ ಜತೆ ಆಟವಾಡುತ್ತಿದ್ದೀರಿ ಎಂದಿತು.
ಗರಿಷ್ಠ 7 ವರ್ಷಗಳವರೆಗೆ ಶಿೆ ವಿಧಿಸಬಹುದಾದ ಪ್ರಕರಣಗಳಲ್ಲಿ ಬಂಧನವು ಕೊನೇ ಆಯ್ಕೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದನ್ನು ಮೀರಿ ಪೊಲೀಸರು ತರಾತುರಿಯಲ್ಲಿ ಬಂಧಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಎಚ್ಚರಿಸಿತು.
ಪ್ರಕರಣದ ಹಿನ್ನೆಲೆ:
ದಂಪತಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬಳು ಮಗಳಿದ್ದಾಳೆ. 2023ರಲ್ಲಿ ವರದಣೆ ಕಿರುಕುಳ ಪ್ರಕರಣ ದಾಖಲಿಸಿದ್ದ ಪತ್ನಿ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಪತಿಯು ತನ್ನ ಸಹಿಯನ್ನು ನಕಲಿಸಿ ಬ್ಯಾಂಕ್ ಖಾತೆ ತೆಗೆದಿದ್ದಾರೆ ಎಂದು ಆರೋಪಿಸಿ 2025ರ ಡಿ. 19ರಂದು ಮತ್ತೊಂದು ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಪತಿಯನ್ನು ಪೊಲೀಸರು ಬಂಧಿಸಿದ್ದರು.