- ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೆಕೆಆರ್ಟಿಸಿಗೆ 25 ಸಾವಿರ ದಂಡ
- ನ್ಯಾಯಾಲಯದ ಹಾದಿ ತಪ್ಪಿಸಬೇಡಿ ಎಂದು ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು: ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಪ್ರಯಾಣಿಕನ ಕುಟುಂಬಕ್ಕೆ 1.1 ಕೋಟಿ ಪರಿಹಾರ ನೀಡಬೇಕಾಗುತ್ತದೆ ಎಂದು ಮೃತನ ಮೇಲೆಯೇ ತಪ್ಪು ಹೊರಿಸಲು ಪ್ರಯತ್ನಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ನಡೆಯನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.
ಕಲಬುರಗಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್ ಪ್ರಯಾಣಿಕ ವಿನೋದ್ ಕುಮಾರ್ ಎಂಬುವರು ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ 1.1 ಕೋಟಿ ರೂ. ಪರಿಹಾರ ಪಾವತಿಸುವಂತೆ ನಿಗಮಕ್ಕೆ ಮೋಟಾರು ವಾಹನ ಅಪಘಾತ ಹಕ್ಕುಗಳ ನ್ಯಾಯಾಧಿಕರಣವು (ಎಮ್ಎಸಿಟಿ) 2025ರ ಮಾ. 14ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೆಕೆಆರ್ಟಿಸಿ ಹೈಕೋರ್ಟ್ನ ಕಲಬುರಗಿ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಬಸ್ ಕಾಲಿ ಇದ್ದರೂ ಕೂಡ ಪ್ರಯಾಣಿಕನು ಬಾಗಿಲಲ್ಲಿ ನಿಂತಿದ್ದೇ ಅಪಘಾತಕ್ಕೆ ಕಾರಣ ಎಂದು ಕೆಕೆಆರ್ಟಿಸಿ ಪರ ವಕೀಲರು ವಾದಿಸಿದ್ದರು. ಆದರೆ, ಈ ಅಪಘಾತಕ್ಕೆ ಕಾರಣವಾದ ಚಾಲಕನ್ನು ಕೆಲಸದಿಂದ ವಜಾಗೊಳಿಸಿ, ನಿರ್ವಾಹಕನ ವೇತನ ಬಡ್ತಿ ತಡೆಹಿಡಿದು ಶಿಸ್ತು ಕ್ರಮ ಕೈಗೊಂಡಿರುವುದು ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಚಿಲ್ಲಾಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠದ ಗಮನಕ್ಕೆ ಬಂದಿತ್ತು. ಆದ್ದರಿಂದ, ಒಂದೆಡೆ ತನ್ನ ನೌಕರರೇ ಅಪರಾಧಿಗಳು ಎಂದು ಶಿಸ್ತುಕ್ರಮ ಕೈಗೊಂಡು, ಇನ್ನೊಂದೆಡೆ ಮೃತ ಪ್ರಯಾಣಿಕನ ನಿರ್ಲಕ್ಷ್ಯವೇ ಅಪರಾಧಕ್ಕೆ ಕಾರಣ ಎಂದು ವಾದಿಸುವುದು ಅಸಂಬದ್ಧ ಎಂದು ನ್ಯಾಯಪೀಠ ಹೇಳಿದೆ.
ಸರ್ಕಾರದ ಅಂಗಸಂಸ್ಥೆಯಾಗಿರುವ ನಿಗಮವು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲು ಯತ್ನಿಸಿರುವುದು ಸರಿಯಲ್ಲ. ಅರ್ಜಿದಾರರು ನ್ಯಾಯಾಲಯಕ್ಕೆ ಬರುವಾಗ ಸ್ವಚ್ಛ ಹಸ್ತದಿಂದ ಬರಬೇಕು, ಸತ್ಯವನ್ನು ಮರೆಮಾಚುವುದು ಸರಿಯಲ್ಲ ಎಂದು ಎಚ್ಚರಿಸಿರುವ ನ್ಯಾಯಪೀಠ, ಪರಿಹಾರ ಪಾವತಿಸಲು ಆದೇಶಿಸಿದ್ದ ನ್ಯಾಯಾಧಿಕರಣದ ತೀರ್ಪನ್ನು ಎತ್ತಿಹಿಡಿದಿದೆ.
25 ಸಾವಿರ ದಂಡ:
ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಮತ್ತು ನಿರ್ವಾಹಕನ ವಿರುದ್ಧ ತೆಗೆದುಕೊಂಡ ಶಿಸ್ತುಕ್ರಮದ ಮಾಹಿತಿಯನ್ನು ಆರಂಭಿಕ ಹಂತದಲ್ಲಿ ಮುಚ್ಚಿಟ್ಟ ನಿಗಮದ ಕ್ರಮವನ್ನು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ನ್ಯಾಯಪೀಠ ಹೇಳಿದೆ. ಈ ಪ್ರಕರಣ ಹೂಡಲು ಕಾರಣವಾದ ನಿಗಮದ ಅಧಿಕಾರಿಗಳು 25 ಸಾವಿರ ರೂಪಾಯಿ ದಂಡವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿದೆ. #High court
ℹ️ ನಿಗಮಕ್ಕೆ ಪ್ರಮುಖ ನಿರ್ದೇಶನಗಳು
- ಈ ರೀತಿಯ ಪ್ರಕರಣಗಳಲ್ಲಿ ಶಿಸ್ತು ಕ್ರಮದ ಮಾಹಿತಿಯನ್ನು ನ್ಯಾಯಾಲಯದ ಎದುರು ಕಡ್ಡಾಯವಾಗಿ ಬಹಿರಂಗಪಡಿಸಲು ಸುತ್ತೋಲೆ ಹೊರಡಿಸಬೇಕು.
- ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪಾರದರ್ಶಕತೆ ಪರಿಶೀಲಿಸಲು ಸಮರ್ಪಕ ವ್ಯವಸ್ಥೆ ರೂಪಿಸಬೇಕು.
- ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಹೊಣೆಗಾರಿಕೆ ನಿಗದಿಪಡಿಸಬೇಕು.