- ಗಣಿಗಾರಿಕೆ ತಡೆದಿದ್ದ ಸರ್ಕಾರದ ಕ್ರಮ ಎತ್ತಿಹಿಡಿದ ನ್ಯಾಯಾಲಯ
- ಸ್ಪಷ್ಟಪಡಿಸಿದ ಹೈಕೋರ್ಟ್
ಶ್ರವಣ್ ನೀರಬಿದಿರೆ ಬೆಂಗಳೂರು
ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅಧಿಕೃತವಾಗಿ ಮೀಸಲು ಅರಣ್ಯ ಎಂದು ಘೋಷಿಸದ ಜಮೀನನ್ನು ಕೂಡ ಅರಣ್ಯೀಕರಣ ಉದ್ದೇಶಕ್ಕೆ ಬಳಸಿದ್ದರೆ ಅಥವಾ ಕಾಯ್ದಿರಿಸಿದ್ದರೆ ಅಂತಹ ಜಮೀನನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೈಸೂರು ಜಿಲ್ಲೆಯ ಅತ್ತಿಗುಪ್ಪೆ ಗ್ರಾಮದ ಸರ್ವೇ ನಂ.23ರಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದ ಅರಣ್ಯ ಇಲಾಖೆಯ ಕ್ರಮ ಪ್ರಶ್ನಿಸಿ ಲಕ್ಷ್ಮಣ ಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ.
ಸುಪ್ರೀಂಕೋರ್ಟ್ನ ಟಿ.ಎನ್. ಗೋದಾವರ್ಮನ್ ತಿರುಮುಲ್ಪಾಡ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಅರಣ್ಯ ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಬಳಸಬೇಕು. ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ದಾಖಲಾಗಿರುವ ಅಥವಾ ಅರಣ್ಯೀಕರಣಕ್ಕೆ ಬಳಕೆಯಾಗಿರುವ ಯಾವುದೇ ಜಾಗಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆಯು ಅನ್ವಯಿಸುತ್ತದೆ. ಒಂದು ವೇಳೆ ಅರಣ್ಯೀಕರಣದ ಪ್ರಯತ್ನಗಳು ಯಾವುದೋ ಹಂತದಲ್ಲಿ ವಿಫಲವಾಗಿದ್ದರೂ ಆ ಜಮೀನಿನ ಮೂಲ ಸ್ವರೂಪ ಬದಲಾಗುವುದಿಲ್ಲ. ಅದು ಅರಣ್ಯ ಜಮೀನಾಗಿಯೇ ಉಳಿಯುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ:
ಅರ್ಜಿದಾರರಿಗೆ ಮೈಸೂರು ಜಿಲ್ಲೆಯ ಅತ್ತಿಗುಪ್ಪೆ ಗ್ರಾಮದ ಸರ್ವೇ ನಂ. 23ರಲ್ಲಿ 7.20 ಎಕರೆ ಜಮೀನನ್ನು ಕಲ್ಲು ಗಣಿಗಾರಿಕೆಗಾಗಿ 20 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಆ ಸಮಯದಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳು ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಿದ್ದವು. ಆದರೆ, ಈ ಜಮೀನುಗಳಿರುವ 180 ಎಕರೆ ಪ್ರದೇಶವನ್ನು 1900ರಲ್ಲಿಯೇ ಕಲ್ಲಬೆಟ್ಟ ಬ್ಲಾಕ್- 1 ಸ್ಟೇಟ್ ಫಾರೇಸ್ಟ್ ಎಂದು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ಕಾಲಾನಂತರದಲ್ಲಿ ಈ ಪ್ರದೇಶದ ಕಲೆವು ಭಾಗಗಳನ್ನು ಕೃಷಿ ಮತ್ತು ಅರಣ್ಯೇತರ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬ ಗೊಂದಲವಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ನಂತರ ಈ ಜಮೀನನ್ನು ಕಂದಾಯ ದಾಖಲೆಗಳಲ್ಲಿ "ಪರಿಹಾರಾತ್ಮಕ ಅರಣ್ಯ ಪ್ರದೇಶ' ಎಂದು ದಾಖಲಿಸಲು ಸಹಾಯಕ ಆಯುಕ್ತರು 2022ರಲ್ಲಿ ನಿರ್ದೇಶನ ನೀಡಿದ್ದರು.
ಈ ಬೆಳವಣಿಗೆಯ ಕಾರಣ ಗಣಿಗಾರಿಕೆಗೆ ಈ ಹಿಂದೆ ನೀಡಿದ್ದ ಎನ್ಒಸಿಯನ್ನು ಅರಣ್ಯ ಇಲಾಖೆ ಹಿಂಪಡೆದಿತ್ತು. ಆದ್ದರಿಂದ ಗಣಿಗಾರಿಕೆ ನಿಲ್ಲಿಸುವಂತೆ ಭೂವಿಜ್ಞಾನ ಇಲಾಖೆಯು ಅರ್ಜಿದಾರರಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
⚠️ ಅರ್ಜಿದಾರರ ವಾದವೇನಿತ್ತು?
ವಿವಾದಿತ ಜಮೀನನ್ನು 1990ರಲ್ಲಿ ಅರಣ್ಯ ಎಂದು ಘೋಷಿಸಲಾಗಿದ್ದರೂ 1949ರ ಅಧಿಸೂಚನೆಯಲ್ಲಿ ಅದನ್ನು ಕೃಷಿ ಉದ್ದೇಶಕ್ಕಾಗಿ ಅರಣ್ಯ ವ್ಯಾಪ್ತಿಯಿಂದ ಬಿಡುಗಡೆ ಮಾಡಲಾಗಿತ್ತು. 1991ರ ಸರ್ಕಾರಿ ಆದೇಶ ಪ್ರಕಾರ ಅರಣ್ಯ ಎಂದು ಘೋಷಣೆಯಾಗದ ಎಲ್ಲ ಸಿ ಮತ್ತು ಡಿ ವರ್ಗದ ಜಮೀನುಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅದರಂತೆ ಈ ಜಮೀನು ಕೂಡ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ. ಗುತ್ತಿಗೆ ನೀಡುವ ಸಮಯದಲ್ಲಿ ಅರಣ್ಯ ಇಲಾಖೆಯೇ ಈ ಜಮೀನು ಅರಣ್ಯ ವ್ಯಾಪ್ತಿಯಲ್ಲಿ ಇಲ್ಲ ಎಂದು ಎನ್ಒಸಿ ನೀಡಿತ್ತು. 1987-88 ಅವಧಿಯಲ್ಲಿ ಈ ಜಮೀನಿನಲ್ಲಿ ಅರಣ್ಯೀಕರಣ ಚಟುವಟಿಕೆ ನಡೆಸುವ ಕ್ರಮ ವಿಲವಾಗಿತ್ತು ಎಂದು ಅರ್ಜಿದಾರರು ವಾದಿಸಿದ್ದರು. ಈ ವಾದವನ್ನು ನ್ಯಾಯಪೀಠ ನಿರಾಕರಿಸಿದೆ.
ಅರಣ್ಯ ಜಮೀನು ವ್ಯಾಖ್ಯಾನದ ಸ್ಪಷ್ಟನೆ
ಸುಪ್ರೀಂಕೋರ್ಟ್ ವ್ಯಾಖ್ಯಾನದಂತೆ, ಕೇವಲ ಘೋಷಿತ ಮೀಸಲು ಅರಣ್ಯಗಳಷ್ಟೇ ಅಲ್ಲದೆ, ಮಾಲೀಕತ್ವದ ಹಂಗಿಲ್ಲದೆ ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗಿರುವ ಎಲ್ಲ ಪ್ರದೇಶಗಳು ಅರಣ್ಯ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಅರಣ್ಯೀಕರಣ ಉದ್ದೇಶಕ್ಕೆ ಬಳಸಲಾದ ಜಮೀನನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಕಂದಾಯ ಇಲಾಖೆಯು ಪುನಃ ವಶಪಡಿಸಿಕೊಳ್ಳಲು ಅಥವಾ ಅರಣ್ಯೇತರ ಚಟುವಟಿಕೆಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. # high court