High court 
ರಾಜ್ಯ

ಜಾರ್​ ಗೋಲ್ಡ್​ ಖಾತೆ ನಿರ್ಬಂಧ ಎತ್ತಿಹಿಡಿದ ಹೈಕೋರ್ಟ್​| High court

ಪ್ರಮುಖ ಮುಖ್ಯಾಂಶಗಳು

  • ಡಿಫ್ರೀಜ್​ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು
  • ಪೊಲೀಸರಿಗೆ ಅಧಿಕಾರ ಇದೆ ಎಂದು ಸ್ಪಷ್ಟನೆ

ಬೆಂಗಳೂರು: 

ಜಾರ್​ ಗೋಲ್ಡ್​ ರೀಟೇಲ್​ ಪೆ.ಲಿ. ಕಂಪನಿಯ ಬ್ಯಾಂಕ್​ ಖಾತೆಗಳ ವಹಿವಾಟು ರ್ನಿಬಂಧಿಸಿದ್ದ (ಫ್ರೀಜ್​) ಪೊಲೀಸರ ನಿರ್ಧಾರವನ್ನು ಎತ್ತಿಹಿಡಿದಿರುವ ಹೈಕೋರ್ಟ್​, ಖಾತೆಗಳನ್ನು ಡಿಫ್ರೀಜ್​ ಮಾಡಿ ವಿಚಾರಣಾ ನ್ಯಾಯಾಲಯವು ಏ. 4ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯದ ಡಿಫ್ರೀಜ್​ ಆದೇಶವನ್ನು ಪ್ರಶ್ನಿಸಿ ಕೋರಮಂಗಲ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. 
ಭಾರತೀಯ ನಾಗರಿಕ ಸುರಾ ಸಂಹಿತೆಯ (ಬಿಎನ್​ಎಸ್​ಎಸ್​) ಸೆಕ್ಷನ್​ 106ರಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ತನಿಖಾ ಹಂತದಲ್ಲಿ ಬ್ಯಾಂಕ್​ ಖಾತೆಗಳನ್ನು ಫ್ರೀಜ್​ ಮಾಡಲು ತನಿಖಾಧಿಕಾರಿಗೆ ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಬ್ಯಾಂಕ್​ ಖಾತೆಗಳ ಫ್ರೀಜ್​ ಮಾಡಿದ ಪೊಲೀಸರ ಕ್ರಮ ಎತ್ತಿಹಿಡಿದಿದೆಯಾದರೂ, ಕಂಪನಿಯು ಜಿಎಸ್​ಟಿ ಪಾವತಿಸಲು ಮಾತ್ರ ಬ್ಯಾಂಕ್​ ಖಾತೆಗಳನ್ನು ಬಳಸಿಕೊಳ್ಳಲು ನೀಡಲಾಗಿದ್ದ ಮಧ್ಯಂತರ ವಿನಾಯಿತಿಯನ್ನು ಉಳಿಸಿದೆ. 
ಪ್ರಾಸಿಕ್ಯೂಷನ್​ ಪರ ವಾದ ಮಂಡಿಸಿದ್ದ ವಕೀಲರು, ಅಪರಾಧದ ತನಿಖೆಯ ಹಂತದಲ್ಲಿ ಹಣ ದುರುಪಯೋಗ ತಡೆಯಲು ಖಾತೆಗಳ ವಹಿವಾಟು ರ್ನಿಬಂಧಿಸಲು ಪೊಲೀಸರಿಗೆ ಅಧಿಕಾರವಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

ಕಂಪನಿ ವಾದವೇನಿತ್ತು?:

ಬ್ಯಾಂಕ್​ ಖಾತೆಗಳನ್ನು ನೇರವಾಗಿ ರ್ನಿಬಂಧಿಸುವ ಅಧಿಕಾರ ತನಿಖಾಧಿಕಾರಿಗಳಿಗಿಲ್ಲ. ಖಾತೆ ಫ್ರೀಜ್​ ಮಾಡಬೇಕಾದರೆ ಪೊಲೀಸರು ಬಿಎನ್​ಎಸ್​ಎಸ್​ ಸೆಕ್ಷನ್​ 107ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಮ್ಯಾಜಿಸ್ಟ್ರೆಟ್​ ಅನುಮತಿ ಪಡೆದುಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಪೊಲೀಸರು ಆ ಪ್ರಕ್ರಿಯೆ ಕೈಗೊಳ್ಳದೆ ಆತುರದಿಂದ ವರ್ತಿಸಿದ್ದಾರೆ. ಕಂಪನಿಯ ಖಾತೆಗಳನ್ನು ಫ್ರೀಜ್​ ಮಾಡಿದ್ದ ಕಾರಣ ಉದ್ಯೋಗಿಗಳಿಗೆ ವೇತನ ನೀಡಲು ಸಮಸ್ಯೆಯಾಗಿತ್ತು. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಜಾರ್​ ಗೋಲ್ಡ್​ ಪರ ವಕೀಲರು ವಾದಿಸಿದ್ದರು. 

ℹ️

ನಿಯಮದ ಸ್ಪಷ್ಟನೆ ನೀಡಿದ ಕೋರ್ಟ್​

ಕಂಪನಿಯ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಬಿಎನ್​ಎಸ್​ಎಸ್​ನ 106 ಮತ್ತು 107ನೇ ಸೆಕ್ಷನ್​ಗಳು ವಿಭಿನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಿದೆ. ಸೆಕ್ಷನ್​ 107 ಅನ್ನು ಬಳಸಿ ಅಪರಾಧದ ಹಣವನ್ನು ಜಪ್ತಿ ಮಾಡಬಹುದು. ಆದರೆ, ತನಿಖಾ ಹಂತದಲ್ಲಿ ಖಾತೆ ರ್ನಿಬಂಧಿಸುವುದಕ್ಕೆ ಸೆಕ್ಷನ್​ 106 ಅವಕಾಶ ನೀಡುತ್ತದೆ. ಸೆಕ್ಷನ್​ 107 ಒಂದನ್ನೇ ಬ್ಯಾಂಕ್​ ಖಾತೆಗಳ ಮೇಲಿನ ಕ್ರಮಕ್ಕೆ ಏಕೈಕ ಮಾರ್ಗವೆಂದು ವ್ಯಾಖ್ಯಾನಿಸಿದರೆ, ಅದು ಸೆಕ್ಷನ್​ 106ರ ಅಡಿಯಲ್ಲಿ ತನಿಖಾಧಿಕಾರಿಗೆ ನೀಡಿದ ಅಧಿಕಾರವನ್ನೇ ನಿಷ್ಕಿಯಗೊಳಿಸಿದಂತಾಗುತ್ತದೆೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:


ಜಾರ್​ ಗೋಲ್ಡ್​ನ ಡಿಜಿಟಲ್​ ಪ್ಲಾಟ್​ಫಾಮ್​ರ್ ಮೂಲಕ ಚಿನ್ನದ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯನ್ನು ಸೂಕ್ತ ಅನುಮತಿಯಿಲ್ಲದೆ ನಡೆಸಲಾಗುತ್ತಿದೆ ಎಂಬ ಆರೋಪದ ಮೇಲೆ ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾ ಹಂತದಲ್ಲಿ ಪೊಲೀಸರು ಬ್ಯಾಂಕ್​ಗಳಿಗೆ ಸೂಚನೆ ನೀಡಿ ಜಾರ್​ ಗೋಲ್ಡ್​ನ ಬ್ಯಾಂಕ್​ ಖಾತೆಗಳನ್ನು ಫ್ರೀಜ್​ ಮಾಡಿಸಿದ್ದರು. ಇದನ್ನು ಪ್ರಶ್ನಿಸಿ ಕಂಪನಿಯು ನ್ಯಾಯಾಲಯದ ಮೊರೆ ಹೋಗಿತ್ತು.