High court 
ರಾಜ್ಯ

3 ಕೋಟಿ ಜೀವನಾಂಶ ಬಾಕಿ| ಪತಿ ವಿರುದ್ಧದ ಬಂಧನ ವಾರಂಟ್​ | High court

ಬೆಂಗಳೂರು: ಅಂದಾಜು 3 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಜೀವನಾಂಶ ಬಾಕಿ ಉಳಿಸಿಕೊಂಡಿದ್ದ ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್​ ಅನ್ನು ಹೈಕೋರ್ಟ್​ ಎತ್ತಿಹಿಡಿದಿದೆ. ನ್ಯಾಯಾಲಯದ ಆದೇಶಗಳನ್ನು ಘೋಷಣೆಗಳಾಗಿ ಪರಿಗಣಿಸದೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದೆ.
ಮಂಗಳೂರಿನ ಶೈಲೇಶ್​ ಕುಮಾರ್​ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ. ಮನ್ಮಥರಾವ್​ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ಉದ್ದೇಶಪೂರ್ವಕವಾಗಿ ಜೀವನಾಂಶ ಪಾವತಿಸದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.
ದಂಪತಿ ವಿವಾಹ 1998ರಲ್ಲಿ ನಡೆದಿದ್ದು, ಒಬ್ಬ ಪುತ್ರನಿದ್ದಾನೆ. ಪತ್ನಿಯು 2014ರಲ್ಲಿ ಮಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ 2012ರಿಂದ ಅನ್ವಯವಾಗುವಂತೆ ಮಾಸಿಕ 1.80 ಲಕ್ಷ ರೂ. ನಿಂದ 2.80 ಲಕ್ಷ ರೂ. ತನಕ ವಿವಿಧ ಅವಧಿಗಳಲ್ಲಿ ಜೀವನಾಂಶ ಪಾವತಿಸಲು ಆದೇಶಿಸಿತ್ತು. ಆದರೆ, ಪತಿಯು ಇದನ್ನು ಪಾವತಿಸಲು ವಿಲವಾದ ಕಾರಣ ಬಾಕಿ ಮೊತ್ತವು 3.67 ಕೋಟಿ ರೂ. ಗೆ ಏರಿಕೆಯಾಗಿತ್ತು. ಈ ಆದೇಶ ಪ್ರಶ್ನಿಸಿ ಪತಿ ಮರುಪರಿಶೀಲನೆ ಅರ್ಜಿ ಸಲ್ಲಿಸಿದ್ದರು. ಶೇ.50 ಹಣವನ್ನು ಠೇವಣಿ ಇಡುವಂತೆ ನಿರ್ದೇಶನ ನೀಡಲಾಗಿತ್ತು. ಈ ಆದೇಶ ಪಾಲಿಸದ ಪತಿಯ ವಿರುದ್ಧ ವಾರಂಟ್​ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿದಾರರ ವಾದವೇನಿತ್ತು?:

ತಾನು ತಿಂಗಳಿಗೆ 42 ಸಾವಿರ ರೂ. ವೇತನ ಪಡೆಯುತ್ತಿದ್ದು, ಸಂಕಷ್ಟದಲ್ಲಿದ್ದೇನೆ. ಕೋಟ್ಯಂತರ ರೂಪಾಯಿ ಜೀವನಾಂಶ ನೀಡಲು ಸಾಧ್ಯವಿಲ್ಲ. ತನ್ನ ವಿರುದ್ಧ ಹೊಡಿಸಿರುವ ವಾರಂಟ್​ ಸಂವಿಧಾನದ 21ನೇ ವಿಧಿಯಡಿ ವೈಯಕ್ತಿಕ ಸ್ವಾತಂತ್ರ$್ಯದ ಉಲ್ಲಂನೆಯಾಗುತ್ತದೆ. ಅಲ್ಲದೆ, ವಾರಂಟ್​ಗೂ ಮೊದಲು ಆಸ್ತಿ ಜಪ್ತಿಯಂತಹ ನಾಗರಿಕ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಅರ್ಜಿದಾರರು ವಾದಿಸಿದ್ದರು. #high court
⚠️

ಸಾಮಾಜಿಕ ನ್ಯಾಯದ ಭಾಗ 

ಜೀವನಾಂಶವು ಸಾಮಾಜಿಕ ನ್ಯಾಯದ ಭಾಗವಾಗಿದೆ. ಈ ಆದೇಶಗಳನ್ನು ಗಾಳಿಗೆ ತೂರುವ ಪ್ರವೃತ್ತಿಗಳಿಗೆ ಅನುಮತಿ ನೀಡಿದರೆ ನ್ಯಾಯಾಂಗದ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್​, ಬಂಧನ ವಾರಂಟ್​ ಎತ್ತಿಹಿಡಿದಿದೆ. ಪತಿಯು ಮಗನ ಶಿಕ್ಷಣಕ್ಕಾಗಿ ವಾರ್ಷಿಕ ಸುಮಾರು 12 ಲಕ್ಷ ರೂ. ಪಾವತಿಸುತ್ತಿರುವುದು ಮತ್ತು ವಿದೇಶಿ ಪ್ರವಾಸಗಳಂತಹ ಐಷಾರಾಮಿ ಜೀವನ ನಡೆಸುತ್ತಿರುವುದಕ್ಕೆ ಪುರಾವೆಗಳಿವೆ. ಹಾಗಾಗಿ ಅವರ ಆರ್ಥಿಕ ಸಂಕಷ್ಟದ ವಾದವನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ವಾರಂಟ್​ ಹೊರಡಿಸಿರುವುದು ಸರಿಯಾಗಿಯೇ ಇದೆ ಎಂದು ಹೇಳಿದೆ.