- ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು:ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ವಿದೇಶಿಗರ ಪತ್ತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದ್ದು, ಬಂಧನದ 24 ಗಂಟೆ ಅವಧಿಯೊಳಗೆ ಮ್ಯಾಜಿಸ್ಟ್ರೆಟ್ ಮುಂದೆ ಹಾಜರುಪಡಿಸದೆ ಸಂವಿಧಾನದ 22ನೇ ವಿಧಿಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಇಬ್ಬರು ನೈಜೀರಿಯನ್ ಪ್ರಜೆಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಸಂವಿಧಾನದ ಪ್ರಕಾರ ಯಾವುದೇ ಕಾರಣಗಳನ್ನು ನೀಡದೆ ಬಂಧಿಸುವುದು ಸರಿಯಲ್ಲ. ಅರ್ಜಿದಾರರನ್ನು 24 ಗಂಟೆಯೊಳಗೆ ಮ್ಯಾಜಿಸ್ಟ್ರೆಟ್ ಮುಂದೆ ಹಾಜರುಪಡಿಸಿಲ್ಲ. ಬಂಧಿಸುವಾಗ ಸೂಕ್ತ ಕಾರಣಗಳನ್ನು ಲಿಖಿತವಾಗಿ ನೀಡಿಲ್ಲ ಎಂದು ವಾದಿಸಿದರು.
ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಅರ್ಜಿದಾರರು 2015ರಲ್ಲಿ ಭಾರತಕ್ಕೆ ಬಿಜಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು, ವೀಸಾ ಅವಧಿ ಮುಕ್ತಾಯವಾದರೂ ಅಕ್ರಮವಾಗಿ ನೆಲೆಸಿದ್ದಾರೆ. ಇವರ ಮೇಲೆ ಮಾದಕ ವಸ್ತುಗಳ ಮಾರಾಟ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ವೀಸಾರಹಿತರಾಗಿ ನೆಲೆಸಿ ಮಾದಕವಸ್ತುಗಳ ಜಾಲದಲ್ಲಿ ಸಕ್ರಿಯರಾಗಿರುವ ಇವರು ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಇಂದು ನೈಜೀರಿಯಾ ಪ್ರಜೆಗಳು, ನಾಳೆ ಇನ್ನೊಂದು ದೇಶದವರು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದು ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುವ ವಿಷಯವಾಗಿದೆ. ವಿದೇಶಿ ಪ್ರಜೆಗಳು ದೇಶ ಪ್ರವೇಶಿಸಿದ 14 ದಿನಗಳೊಳಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಅರ್ಜಿದಾರರು ಅದನ್ನೂ ಪಾಲಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸರ್ಕಾರದ ಮೌನಕ್ಕೆ ಆಕ್ಷೇಪ
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ನೋಂದಣಿ ಇಲ್ಲದೆ ಅಕ್ರಮವಾಗಿ ನಗರದಲ್ಲಿ ವಾಸಿಸುತ್ತಿರುವ ವಿದೇಶಿಯರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಜ್ಯ ಸರ್ಕಾರ ಆಶ್ಚರ್ಯಕರವಾದ ಮೌನ ಪ್ರದರ್ಶಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿತು. ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವಂತೆ ನಿರ್ದೇಶಿಸಿತು. ವಿದೇಶಿ ಪ್ರಜೆಗಳಿಗೆ ಸಂವಿಧಾನದ 22ನೇ ವಿಧಿ ಅಡಿಯಲ್ಲಿ ರಕ್ಷಣೆ ಸಿಗುವುದೇ ಎಂಬ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಉತ್ತರಿಸುವುದಾಗಿ ತಿಳಿಸಿ, ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತು.