ಹೈಕೋರ್ಟ್​  
ರಾಜ್ಯ

ಸರ್ಕಾರದ ನಿರಂಕುಶ ವರ್ತನೆಗೆ ಹೈಕೋರ್ಟ್​ ಅಸಮಾಧಾನ

ಪ್ರಮುಖ ಮುಖ್ಯಾಂಶಗಳು

  • 24 ಗಂಟೆಯೊಳಗೆ ನೇಮಕಾತಿ ಆದೇಶ ಬದಲಿಸಿದ್ದ ಸರ್ಕಾರ
  • ನಿರಂಕುಶ ವರ್ತನೆ ಎಂದು ಹೈಕೋರ್ಟ್​ ತೀವ್ರ ಅಸಮಾಧಾನ
  • ಕಾನೂನುಗಳು ಸರ್ಕಾರದ ಸ್ವೇಚ್ಛಾಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ ಎಂದು ಅಭಿಪ್ರಾಯ
  • ಸರ್ಕಾರದ ಪರೀಷ್ಕೃತ ಆದೇಶ ರದ್ದು
ಬೆಂಗಳೂರು: ಸರ್ಕಾರಿ ವಕೀಲರ ನೇಮಕದಲ್ಲಿ ತನ್ನ ಇಚ್ಛೆಯನ್ನು ಬಳಸಲು ಸರ್ಕಾರಕ್ಕೆ ಕಾನೂನು ಅಧಿಕಾರಿಗಳ ನೇಮಕಾತಿ ನಿಯಮಗಳು ಅನುವು ಮಾಡಿಕೊಟ್ಟಿದ್ದರೂ ಅದು ಸ್ವೇಚ್ಛಾಚಾರಕ್ಕೆ ಅನುಮತಿ ನೀಡಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲರ ನೇಮಕಾತಿ ಆದೇಶವನ್ನು ಹೊರಡಿಸಿದ ಕೇವಲ 24 ಗಂಟೆಯೊಳಗೆ ಅದನ್ನು ಬದಲಾಯಿಸಿ, ಮತ್ತೊಬ್ಬ ವಕೀಲರನ್ನು ನೇಮಿಸಿದ್ದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕೀಲ ಸುನಿಲ್​ ಸಂಕ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶವನ್ನು ರದ್ದುಪಡಿಸಿ, ಅರ್ಜಿದಾರರನ್ನು ನೇಮಿಸಿದ ಮೊದಲ ಆದೇಶವನ್ನು ಮರುಸ್ಥಾಪಿಸಿದೆ.
ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದ ಸರ್ಕಾರ, ಸರ್ಕಾರಿ ವಕೀಲರ ನೇಮಕಾತಿಯು ಸರ್ಕಾರದ ಇಚ್ಛೆಗೆ ಒಳಪಟ್ಟಿರುತ್ತದೆ, ಯಾವುದೇ ಸಮಯದಲ್ಲಿ ಅದನ್ನು ಹಿಂಪಡೆಯಬಹುದು. ನೇಮಕಾತಿ ಹಿಂಪಡೆಯುವುದರಿಂದ ಅರ್ಜಿದಾರರ ಯಾವುದೇ ಹಕ್ಕನ್ನು ಕಿತ್ತುಕೊಂಡಂತಾಗುವುದಿಲ್ಲ ಎಂದು ವಾದಿಸಿತ್ತು.

ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯ

ಒಂದು ವೇಳೆ ಸರ್ಕಾರದ ಆದೇಶವನ್ನು ಎತ್ತಿಹಿಡಿದರೆ ಅದು ಸರ್ಕಾರದ ನಿರಂಕುಶ ವರ್ತನೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಸಂವಿಧಾನ ನೀಡಿರುವ ರಕ್ಷಣೆಗಳು ಕೇವಲ ಹೇಳಿಕೆಗಳಾಗಿ ಉಳಿಯುತ್ತದೆ. ಸರ್ಕಾರದ ಈ ರೀತಿಯ ನಿರಂಕುಶ ವರ್ತನೆಗೆ ನ್ಯಾಯಾಲಯ ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಸರ್ಕಾರಕ್ಕೆ ನೀಡಲಾಗಿರುವ ಅಧಿಕಾರವು ಕಾನೂನನ್ನು ಮೀರಲು ಅನುಮತಿ ನೀಡಿಲ್ಲ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯ ಎಂದು ನ್ಯಾಯಪೀಠ ಹೇಳಿದೆ.

ಸರ್ಕಾರದ ಸ್ವೇಚ್ಛೆಯ ವರ್ತನೆ:

ಸರ್ಕಾರದ ವಾದ ತಿರಸ್ಕರಿಸಿರುವ ನ್ಯಾಯಾಲಯ, ಸರ್ಕಾರದ ನೇಮಕಾತಿ ನಿಯಮಗಳು ಸಮಾನತೆಯ ಹಕ್ಕಿನ ಚಿನ್ನದ ದಾರದಿಂದ ಸುತ್ತುವರಿದಿದೆ. ಹಾಗಿರುವಾಗ ಯಾವುದೇ ಕಾನೂನಿನ ಅನ್ವಯವಿಲ್ಲದೆ, ಸಚಿವರೊಬ್ಬರ ಟಿಪ್ಪಣಿಯ ಆಧಾರದಲ್ಲಿ ನೇಮಕಾತಿ ಆದೇಶ ಬದಲಾಯಿಸಿರುವುದು ಸರ್ಕಾರದ ಸ್ವೇಚ್ಛೆಯ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರನ್ನು ನೇಮಿಸಿದ ನಂತರ ಅವರು ನ್ಯಾಯಾಲಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಅವರನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಯಾವುದೇ ಕಾರಣಗಳನ್ನು ನೀಡದೆ ಬದಲಾವಣೆ ಮಾಡಲಾಗಿದೆ. ನಿರಂಕುಶ ವರ್ತನೆ ತೋರದಂತೆ ತಡೆಯುವ ಸಂವಿಧಾನದ ವಿಧಿಗಳನ್ನು ಸರ್ಕಾರ ಪಾಲಿಸಬೇಕು. ಈ ಕ್ರಮವನ್ನು ನಿರಂಕುಶತೆ ಎನ್ನದೆ ಬೇರೆ ಮಾರ್ಗವಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಅದು ಸ್ಪಷ್ಟವಾಗಿ ಪ್ರದರ್ಶನವಾಗಿದೆ ಎಂದು ನ್ಯಾಯಾಲಯ ಖಾರವಾಗಿ ಪ್ರತಿಕ್ರಿಯಿಸಿದೆ.