ಬೆಂಗಳೂರು: ಎಂಟು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ನೀಡಲಾಗಿದ್ದ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿರುವ ಹೈಕೋರ್ಟ್, ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಗೆದರೆ ಗ್ರಾಮದ ಅಶೋಕ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
ಅರ್ಜಿದಾರರ ಪರ ನ್ಯಾಯವಾದಿ ನಮನ್ ವಂಕ್ದಾರಿ ವಾದಿಸಿದ್ದರು. ವಿಚಾರಣಾ ನ್ಯಾಯಾಲಯವು ಸಾಕ್ಷಿಗಳ ಹೇಳಿಕೆಗಳಲ್ಲಿನ ಗಂಭಿರ ವ್ಯತ್ಯಾಸಗಳನ್ನು ಗಮನಿಸದೇ ತೀರ್ಪು ನೀಡಿದೆ. ದೂರು ನೀಡುವಲ್ಲಿ ವಿಳಂಬವಾಗಿದೆ ಮತ್ತು ಬಾಲಕನ ಮೇಲೆ ದೌರ್ಜನ್ಯ ನಡೆದಿದೆ ಎಂಬುದಕ್ಕೆ ಬಲವಾದ ವೈದ್ಯಕಿಯ ಸಾಕ್ಷ್ಯಗಳಿಲ್ಲ. ಡಿಜಿಟಲ್ ಪುರಾವೆಗಳ ವಿಶ್ಲೇಷಣೆಯಲ್ಲಿ ಲೋಪ-ದೋಷಗಳಿವೆ ಎಂದು ಆಕ್ಷೇಪಣೆ ಸಲ್ಲಿಸಲಾಗಿತ್ತು.
2021ರ ಏಪ್ರಿಲ್ 15ರಂದು ಎಂಟು ವರ್ಷದ ಬಾಲಕನಿಗೆ ಸಿಗರೇಟ್ ತರಲು ಹಣ ನೀಡಿ, ನಂತರ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಅಶೋಕ ಮತ್ತು ಲೋಕೇಶ ಎಂಬವರ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ಅಶೋಕನನ್ನು ದೋಷಿ ಎಂದು ಘೋಷಿಸಿತ್ತು. ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ದಂಡ ಮತ್ತು ಐಟಿ ಕಾಯ್ದೆಯಡಿ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.