High court 
ರಾಜ್ಯ

ಅನೈತಿಕ ಸಂಬಂಧ ಹೊಂದಿರುವ ಪತಿಯಿಂದ ದೂರವಿದ್ದರೆ ಪರಿತ್ಯಾಗವಲ್ಲ| High court

ಬೆಂಗಳೂರು: ಪತಿಯ ಅನೈತಿಕ ಸಂಬಂಧವು ಪತ್ನಿಯು ಆತನಿಂದ ದೂರವಿರಲು ಕಾನೂನುಬದ್ಧ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಪರಿತ್ಯಾಗ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಬೀದರ್​ನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಸೂರಜ್​ ಗೋವಿಂದರಾಜ್​ ಮತ್ತು ಚಿಲ್ಲಾಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವು ಸಾಾಧಾರಗಳ ಕೊರತೆ ಮತ್ತು ಏಕಪಯ ಮೌಲ್ಯಮಾಪನದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಪ್ರಕರಣವನ್ನು ಮರುವಿಚಾರಣೆಗಾಗಿ ವಾಪಸ್​ ಕಳುಹಿಸಿದೆ. 
ಪತಿಯು ತನ್ನ ವಿರುದ್ಧ ಮಾಡಿದ್ದ ಕ್ರೌರ್ಯ ಮತ್ತು ಪರಿತ್ಯಾಗ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಸಾಗಳನ್ನು ಒದಗಿಸಿಲ್ಲ. ಆದರೂ ಕೌಟುಂಬಿಕ ನ್ಯಾಯಾಲಯವು ಪತಿಯ ಮೌಖಿಕ ಹೇಳಿಕೆಯನ್ನು ಆಧರಿಸಿ ವಿಚ್ಛೇದನ ನೀಡಿರುವುದು ಸರಿಯಲ್ಲ ಎಂದು ಹೇಳಿದೆ.
ಪತಿಯು ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದ ಪತ್ನಿಯು ಪತಿಯ ಎರಡನೇ ಸಂಬಂಧದಲ್ಲಿ ಜನಿಸಿದ ಮಗುವಿನ ಶಾಲಾ ದಾಖಲಾತಿ ಮತ್ತು ಭಾವಚಿತ್ರಗಳನ್ನು ಹೈಕೋರ್ಟ್​ಗೆ ಸಲ್ಲಿಸಿದ್ದರು. ಈ ಅಂಶವನ್ನು ಪರಿಗಣಿಸಿರುವ ನ್ಯಾಯಪೀಠ, ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿರುವಾಗ ಆತನ ಜತೆ ವಾಸಿಸಲು ಪತ್ನಿ ನಿರಾಕರಿಸುವುದು ಕಾನೂನುಬದ್ಧವಾಗಿ ಸರಿಯಾಗಿದೆ ಎಂದು ಹೇಳಿದೆ. 
ತನಗೆ ಎಚ್​ಐವಿ ಇದೆ ಎಂದು ಪತ್ನಿ ಅಪಪ್ರಚಾರ ಮಾಡಿ ಕ್ರೌರ್ಯ ಎಸಗಿದ್ದಾಳೆ. ಅಲ್ಲದೆ, ತನ್ನೊಂದಿಗೆ ಸಹಜೀವನ ನಡೆಸದೆ ಪರಿತ್ಯಾಗ ಮಾಡಿದ್ದಾಳೆ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಪತಿ ವಾದಿಸಿದ್ದನು. ಈ ರೀತಿಯ ಗಂಭೀರ ಆರೋಪಗಳನ್ನು ಮಾಡಿದಾಗ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು high court​ ತಿಳಿಸಿದೆ.