- ಸ್ವಾಯತ್ತೆಗೆ ಧಕ್ಕೆ ಎಂದು ಅರ್ಜಿ ಸಲ್ಲಿಸಿರುವ ಹಲವು ಸಂಘಗಳು
- ವಿವರವಾದ ಪರಿಶೀಲನೆ ಅಗತ್ಯವಿದೆ ಎಂದ ಹೈಕೋರ್ಟ್
ಬೆಂಗಳೂರು: ಸಹಕಾರಿ ಸಂಘಗಳಿಗೆ ಸರ್ಕಾರಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ನೀಡುವ ಸೆಕ್ಷನ್ 53-ಎ ಸೇರಿದಂತೆ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ಕೆಲವು ಮಹತ್ವದ ತಿದ್ದುಪಡಿಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
2025ರ ಸಹಕಾರಿ ಸಂಘಗಳ (ತಿದ್ದುಪಡಿ) ಕಾಯ್ದೆ ಅಡಿಯಲ್ಲಿ ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಸಹಕಾರಿ ಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮದ್ಯಂತರ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ತಿದ್ದುಪಡಿ ಕಾಯ್ದೆಯ ಸೆಕ್ಷನ್ 53-ಎ ಅಡಿಯಲ್ಲಿ ಸಹಕಾರಿ ಸಂಘಗಳ ಆಡಳಿತ ಮಂಡಳಿಗೆ ಸರ್ಕಾರವು ಸದಸ್ಯರನ್ನು ನಾಮನಿರ್ದೇಶನ ಮಾಡುವುದು ಸಹಕಾರಿ ಸಂಘಗಳ ಪ್ರಜಾಸತ್ತಾತ್ಮಕ ಸ್ವರೂಪ ಮತ್ತು ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ. ಸೆಕ್ಷನ್ 98ಜಿ ಅಡಿಯಲ್ಲಿ ಒಬ್ಬ ನಾಮನಿರ್ದೇಶಿತ ಸದಸ್ಯನಿಗೆ ಮಾತ್ರ ಅವಕಾಶವಿದ್ದರೂ ಹೊಸ ತಿದ್ದುಪಡಿಗಳು ಈ ಮಿತಿಯನ್ನು ಮೀರುತ್ತಿವೆ. ಇದು ಸಂವಿಧಾನದ 19(1)(ಸಿ) ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್ ಈ ಹಿಂದೆ ಯೂನಿಯನ್ ಆಫ್ ಇಂಡಿಯಾ ವರ್ಸಸ್ ರಾಜೇಂದ್ರ ಎನ್. ಶಾ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು.
ಅಧಿಕಾರ ವ್ಯಾಪ್ತಿ ಮೀರಿ ಕ್ರಮ:
ಮುಖ್ಯವಾಗಿ, ಕೇಂದ್ರ ಸರ್ಕಾರ ಅಥವಾ ನಬಾರ್ಡ್ನಿಂದ ಸಹಾಯ ಪಡೆದ ಸಂಘಗಳಿಗೂ ರಾಜ್ಯ ಸರ್ಕಾರವು ತನ್ನ ನಾಮನಿರ್ದೇಶಿತರನ್ನು ಕಳುಹಿಸಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ರಾಜ್ಯ ಶಾಸಕಾಂಗಕ್ಕೆ ಇರುವ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮವಾಗಿದೆ. ಈ ತಿದ್ದುಪಡಿಯು ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರ ವಕೀಲರು ಆತಂಕ ವ್ಯಕ್ತಪಡಿಸಿದ್ದರು. #High court
⚠️ ವಿವರವಾದ ಪರಿಶೀಲನೆ ಅಗತ್ಯ
ಅರ್ಜಿದಾರರ ವಾದಂಶಗಳನ್ನು ಆಲಿಸಿದ ನ್ಯಾಯಪೀಠ, ಈ ವಿಷಯಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ತಿದ್ದುಪಡಿ ಮಾಡಲಾಗಿರುವ 2(ಎ1-1), 28ಎ, 58 ಮತ್ತು 53ಎ ಸೆಕ್ಷನ್ಗಳಿಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿದೆ.