- ಹಿಂದೂ ವಿವಾಹ ಕಾಯ್ದೆ ಅಡಿ ಹೈಕೋರ್ಟ್ ಸ್ಪಷ್ಟನೆ
- ಪತಿ ಸಲ್ಲಿಸಿದ ಅರ್ಜಿ ವಜಾ
ಬೆಂಗಳೂರು: ವಿಚ್ಚೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ ಕಾನೂನು ಹೋರಾಟ ನಡೆಸಲು ಮತ್ತು ಜೀವನ ನಿರ್ವಹಣೆಗಾಗಿ ಮಧ್ಯಂತರ ಜೀವನಾಂಶವನ್ನು ಪಡೆಯುವುದು ಪತ್ನಿಯ ಹಕ್ಕಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಪತ್ನಿಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಹಾಸನದ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಡಾ.ಕೆ. ಮನ್ಮಥರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸ್ಪಷ್ಟನೆ ನೀಡಿದೆ.
ಪತ್ನಿಗೆ ಯಾವುದೇ ಸ್ವತಂತ್ರ ಆದಾಯವಿಲ್ಲದ ಕಾರಣ ಆಕೆಗೆ ಆರ್ಥಿಕ ನೆರವು ನೀಡುವುದು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಅನಿವಾರ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಪತಿಯ ಆದಾಯವು 47 ಸಾವಿರ ರೂ. ಗೂ ಅಧಿಕ ಇದೆ ಎಂದು ಪರಿಗಣಿಸಿ, ಮಾಸಿಕ 10 ಸಾವಿರ ರೂ. ಜೀವನಾಂಶ ನೀಡುವಂತೆ ನಿರ್ದೇಶನ ನೀಡಿದೆ.
ಪತ್ನಿಯು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಪೆಟ್ಟಿಶಾಪ್ ಕೂಡ ನಡೆಸುತ್ತಿದ್ದಾರೆ. ತಾನು ಅಂಗವಿಕಲನಾಗಿದ್ದು, ವಯಸ್ಸಾದ ತಾಯಿಯನ್ನು ಕೂಡ ನೋಡಿಕೊಳ್ಳಬೇಕಿದೆ. ಆದ್ದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಪತಿ ವಾದಿಸಿದ್ದರು. ಈ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಪತಿಯ ಒಟ್ಟು ಆದಾಯಯಕ್ಕೆ ಹೋಲಿಸಿದರೆ ಜೀವನಾಂಶದ ಪ್ರಮಾಣ ಹೆಚ್ಚಾಗಿಲ್ಲ ಎಂದು ತೀರ್ಪಿನಲ್ಲಿ ಹೇಳಿದ್ದು, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಪತ್ನಿಯ ಹಿಂದಿನ ವಿವಾಹದ ಬಗ್ಗೆ ಹೊರಿಸಲಾದ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಆದೇಶದಲ್ಲಿ ಹೇಳಿದೆ. #high court
✅ ಪ್ರಕರಣದ ಹಿನ್ನಲೆ
ಹಾಸನ ಮೂಲದ ದಂಪತಿಯು 2020ರಲ್ಲಿ ವಿವಾಹವಾಗಿದ್ದರು. ದಂಪತಿಗಳ ನಡುವಿನ ಕಲಹದಿಂದ ವಿಚ್ಚೇದನ ಕೋರಿ ಪತಿ ಹಾಸನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯು ತನ್ನ ಮೇಲೆ ಕ್ರೌರ್ಯ ಎಸಗುತ್ತಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ನಡುವೆ ಪತ್ನಿಯು ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯ ಮಾಸಿಕ 10 ಸಾವಿರ ರೂ. ಜೀವನಾಂಶ ನಿಗದಿಪಡಿಸಿತ್ತು. ಇದನ್ನು ಪತಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.