ಬೆಂಗಳೂರು: ರಾಜ್ಯದಲ್ಲಿ ಅವ್ಯಾಹತವಾಗಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಗೃಹ ಸಚಿವ ಪರಮೇಶ್ವರ ಮಂಗಳವಾರ (ಜ.27) ವಿಧಾನಸಭೆಯಲ್ಲಿ ಮರಳು ದಂಧೆ ವ್ಯಾಪಕತೆ ಕುರಿತು ಪ್ರಶ್ನೆಗೆ ಉತ್ತರಿಸುವಾಗ 'ಅಕ್ರಮ ಮರಳು ಗಣಿಗಾರಿಕೆ ಒಂದು ದೊಡ್ಡ ದಂಧೆಯಾಗಿ ಬೆಳೆದಿದೆ. ಇದು ಸ್ವಲ್ಪ ಮುಜುಗರದ ವಿಷಯವಾಗಿರುವುದರಿಂದ ನಾನು ಯಾವುದೇ ವಿವರಣೆ ಅಥವಾ ಯಾರ ಹೆಸರನ್ನು ಉಲ್ಲೇಖಿಸುತ್ತಿಲ್ಲ. ಈ ದಂಧೆಯಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಈ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗುವುದು' ಎಂದು ಹೇಳಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಮರಳು ಮಾಫಿಯಾ ಹತ್ತಿಕ್ಕಲು ಸ್ವತಃ ರಾಜ್ಯದ ಗೃಹ ಸಚಿವರೆ ಅಸಹಾಯಕತೆ ವ್ಯಕ್ತಪಡಿಸಿರುವಾಗ ರಾಜ್ಯದ ಆಡಳಿತ ವ್ಯವಸ್ಥೆ ಮೂಲಕ ಈ ಕಾನೂನುಬಾಹಿರ ಚಟುವಟಿಕೆಯನ್ನು ತಡೆಯಬಹುದು ಎಂಬ ಯಾವುದೇ ಭರವಸೆ ಇಲ್ಲ. ಇದನ್ನು ತಡೆಯಲು ಕೇಂದ್ರ ತನಿಖಾ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡದಿಂದ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಪೀಠ, ಮೂರು ವಾರಗಳೊಳಗೆ ಉತ್ತರಿಸುವಂತೆ ಗೃಹ, ಗಣಿ ಮತ್ತು ಭೂ ವಿಜ್ಞಾನ ಮತ್ತು ಅರಣ್ಯ ಇಲಾಖೆಗೆ ಸೂಚಿಸಿದೆ.
ಕೃಷ್ಣಾ ನದಿ ಪಾತ್ರದಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಕಾನೂನುಬದ್ಧ ಗಣಿಗಾರಿಕೆಯಿಂದ ದಂಧೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ದೊಡ್ಡ ದೊಡ್ಡ ತಿಮಿಂಗಿಲಗಳು ಬಿಡ್ ತಡೆಯುತ್ತಿವೆ ಎಂಬ ಅಂಶಗಳು ಮಾಧ್ಯಮಗಳ ವರದಿಯಿಂದ ಗಮನಕ್ಕೆ ಬಂದಿದೆ ಎಂದು ನ್ಯಾಯಪೀಠ ಹೇಳಿದೆ.
ಮರಳು ಅಕ್ರಮ ಗಣಿಗಾರಿಕೆ ತಡೆಗೆ ರಚಿಸಿರುವ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹೆಸರಿಗಷ್ಟೇ ಇದೆ. ಸಿಸಿ ಕ್ಯಾಮರಾ ಮತ್ತು ಚೆಕ್‌ಪೋಸ್ಟ್ ಗಳಿಲ್ಲದ ಕಾರಣ ಅಕ್ರಮ ಮರಳು ಸಾಗಿಸುವ ವಾಹನಗಳಿಂದ ಸರಣಿ ಅಪಘಾತ ಮತ್ತು ಸಾವುಗಳು ಸಂಭವಿಸಿವೆ. ಶಾಸಕಿಯೊಬ್ಬರು ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಜೀವ ಬೆದರಿಕೆ ಎದುರಿಸಿದ್ದಾರೆ. ಅಕ್ರಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿರುವಾಗ ಸರ್ಕಾರದಿಂದೇನು ನಿರೀಕ್ಷಿಸಲು ಸಾಧ್ಯ ಎಂದು ನ್ಯಾಯಾಲಯ ಪ್ರಶ್ನಿಸಿದೆ.