ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಮೊದಲು ಅವರಿಗೆ ನೋಟಿಸ್ ನೀಡಿ, ಅವರ ವಾದ ಆಲಿಸುವುದು ಕಡ್ಡಾಯ. ಇಲಾಖಾ ವಿಚಾರಣೆಯಲ್ಲಿ ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸಬಾರದು ಎಂದು ಹೈಕೋರ್ಟ್ ಹೇಳಿದೆ.
ಮಂಡ್ಯದ ಮುದಗಂದೂರು ಸರ್ಕಾರಿ ಶಾಲಾ ಶಿಕ್ಷಕ ಸೋಮಶೇಖರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರ ಮೇಲಿನ ಶಿಸ್ತುಕ್ರಮವನ್ನು ಎತ್ತಿಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್ಟಿ) ಆದೇಶವನ್ನು ರದ್ದುಗೊಳಿಸಿದೆ.
ಶಿಕ್ಷಕರಾಗಿರುವ ಸೋಮಶೇಖರ್ ಮೇಲೆ 24 ಸಾವಿರ ರೂ. ಹಣ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇಲಾಖಾ ವಿಚಾರಣೆ ನಡೆದು ಶಿಸ್ತು ಪ್ರಾಧಿಕಾರವು ಅವರ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ಕಡಿತಗೊಳಿಸುವ ಮತ್ತು 24 ಸಾವಿರ ರೂ. ಹಣ ವಸೂಲಿ ಮಾಡುವ ಬಗ್ಗೆ ನಿರ್ಧರಿಸಿ 2011ರ ಜುಲೈನಲ್ಲಿ ಶಿಸ್ತುಕ್ರಮ ಕೈಗೊಂಡಿತ್ತು. ಇದರ ವಿರುದ್ಧ ಅರ್ಜಿದಾರರು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು 2013ರಲ್ಲಿ ವಜಾಗೊಳಿಸಲಾಗಿತ್ತು. ಆದರೆ, ನಂತರ ಸಲ್ಲಿಸಿದ್ದ ಎರಡನೇ ಮೇಲ್ಮನವಿಯನ್ನು ಪರಿಗಣಿಸಿದ್ದ ಜಂಟಿ ನಿರ್ದೇಶಕರು, ಶಿಸ್ತುಕ್ರಮದ ಆದೇಶವನ್ನು ರದ್ದುಪಡಿಸಿದ್ದರು.
ಈ ಆದೇಶವನ್ನು ಸ್ವಯಂಪ್ರೇರಿತರಾಗಿ ಪರಿಶೀಲನೆ ನಡೆಸಿದ ಶಿಕ್ಷಣ ಇಲಾಖೆಯ ನಿರ್ದೇಶಕರು 2015ರ ಜೂನ್ನಲ್ಲಿ ರದ್ದುಗೊಳಿಸಿ, ಶಿಸ್ತುಕ್ರಮವನ್ನು ಮರುಸ್ಥಾಪನೆಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಶಿಕ್ಷಕ ಸಲ್ಲಿಸಿದ್ದ ಅರ್ಜಿಯನ್ನು ಕೆಎಸ್ಟಿ ವಜಾಗೊಳಿಸಿತ್ತು. ಆದ್ದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನಿಯಮ ಉಲ್ಲಂಘನೆ:
ಅರ್ಜಿದಾರರ ಪರವಾಗಿದ್ದ ಆದೇಶವನ್ನು ರದ್ದುಗೊಳಿಸುವಾಗ ಶಿಕ್ಷಣ ಇಲಾಖೆಯ ನಿರ್ದೇಶಕರು ನೋಟಿಸ್ ನೀಡಿ, ವಿಚಾರಣೆ ನಡೆಸಿಲ್ಲ ಎಂದು ಶಿಕ್ಷಕರ ಪರ ವಕೀಲರು ವಾದಿಸಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಪೀಠ, ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ, ಯಾವುದೇ ಒಂದು ಶಿಸ್ತು ಕ್ರಮ ಅಥವಾ ಇಲಾಖಾ ವಿಚಾರಣೆಯ ಆದೇಶವನ್ನು ಮರುಪರಿಶೀಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇದೆಯೇ ಹೊರಠ್ಠಿ ಇಲಾಖೆಯ ನಿರ್ದೇಶಕರಿಗಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹೊರಡಿಸಲಾಗಿರುವ ಆದೇಶವು ಕಾನೂನುಬಾಹಿರವಾಗಿದೆ ಎಂದು ರದ್ದುಗೊಳಿಸಿದೆ.