- ಎನ್ಸಿಬಿ ಅಧಿಕಾರಿಗಳು ಡೈರಕ್ಟರ್ ಜನರಲ್ ಒಪ್ಪಿಗೆ ಪಡೆದಿರಬೇಕು
- ಇಲ್ಲವಾದರೆ ಕಾರ್ಯಾಚರಣೆ ಕಾನೂನುಬಾಹಿರ
ಬೆಂಗಳೂರು: ಮಾದಕ ದ್ರವ್ಯ ಸಾಗಾಣಿಕೆಗಾರರನ್ನು ರೆಡ್ಹ್ಯಾಂಡ್ ಆಗಿ ಹಿಡಿಯಲು ಕಂಟ್ರೋಲ್ಡ್ ಡೆಲಿವರಿ ಕಾರ್ಯಾಚರಣೆಯನ್ನು ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯೂರೋದ (ಎನ್ಸಿಬಿ) ಡೈರಕ್ಟರ್ ಜನರಲ್ ನೇತೃತ್ವದಲ್ಲಿ ಅಥವಾ ಅವರ ಪೂರ್ವಾನುಮತಿಯೊಂದಿಗೆ ನಡೆಸಬೇಕು. ಇಲ್ಲವಾದರೆ, ನಾಕೋರ್ಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೊಪಿಕ್ ಆ್ಯಕ್ಟ್ (ಎನ್ಡಿಪಿಎಸ್) ಅಡಿಯಲ್ಲಿ ಕಾರ್ಯಾಚರಣೆಯು ಅಮಾನ್ಯವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಮಾದಕ ದ್ರವ್ಯ ಸಾಗಾಣಿಕೆ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹುಬ್ಬಳ್ಳಿಯ ಜುನೈದ್ ಹುಸೈನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಎನ್ಸಿಬಿ ತನಿಖೆಯಲ್ಲಿ ಗಂಭೀರ ಲೋಪದೋಷಗಳಿದ್ದು, ಅರ್ಜಿದಾರರ ವಿರುದ್ಧ ಸೂಕ್ತ ಸಾಾಧಾರಗಳಿಲ್ಲ ಎಂದು ಹೇಳಿದೆ.
2023ರ ಜೂ.20ರಂದು ಕೊಯಮತ್ತೂರಿನಿಂದ ಬಂದ ಸ್ಪೀಡ್ ಪೋಸ್ಟ್ ಪಾರ್ಸೆಲ್ನಲ್ಲಿ ಮಾದಕ ದ್ರವ್ಯ ಇರುವ ಬಗ್ಗೆ ಎನ್ಸಿಬಿಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಬೆಂಗಳೂರಿನ ಮಾರತಹಳ್ಳಿಯ ವಿಳಾಸಕ್ಕೆ ಬಂದಿದ್ದ ಪಾರ್ಸೆಲ್ನಲ್ಲಿ ಜುನೈದ್ ಹೆಸರಿತ್ತು. ಅದರಲ್ಲಿ 560 ಗ್ರಾಂ ತೂಕದ 50 ಎಲ್ಎಸ್ಡಿ ಬ್ಲಾಟ್ಗಳು ಪತ್ತೆಯಾಗಿದ್ದವು. ಇದನ್ನು ವಶಪಡಿಸಿಕೊಂಡಿದ್ದ ಎನ್ಸಿಬಿ ಅಧಿಕಾರಿಗಳು ಡಮ್ಮಿ ಪಾರ್ಸೆಲ್ ಬಳಸಿ ಕಂಟ್ರೋಲ್ಡ್ ಡೆಲಿವರಿ ಕಾರ್ಯಾಚರಣೆ ನಡೆಸಿದ್ದರು.
ಪಾರ್ಸೆಲ್ ಸ್ವೀಕರಿಸಿದ ಜುನೈದ್ನನ್ನು ಜೂ.22ರಂದು ವಶಕ್ಕೆ ಪಡೆಯಲಾಗಿತ್ತು. ತನ್ನ ಹಿಂದಿನ ರೂಮ್ಮೇಟ್ ಒಬ್ಬನ ಕೋರಿಕೆಯ ಮೇರೆಗೆ ತಾನು ಪಾರ್ಸೆಲ್ ಸ್ವೀಕರಿಸಿದ್ದಾಗಿ, ಅದರಲ್ಲಿ ಮಾದಕ ವಸ್ತುಗಳು ಇತ್ತು ಎಂಬ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಜುನೈದ್ ಅಧಿಕಾರಿಗಳಿಗೆ ತಿಳಿಸಿದ್ದನು. ಆದರೆ, ತನಿಖೆ ನಡೆಸಿದ ಅಧಿಕಾರಿಗಳು ತಪ್ಪೊಪ್ಪಿಗೆ ಹೇಳಿಕೆಗಳನ್ನು ಪಡೆದುಕೋಡಿದ್ದರು. ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು.
ಸ್ವಯಂ ಪ್ರೇರಿತ ಹೇಳಿಕೆ ಸಾಕ್ಷ್ಯವಲ್ಲ:
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಎನ್ಸಿಬಿ ಅಧಿಕಾರಿಗಳು ಕಾರ್ಯಾಚರಣೆ ವೇಳೆ ನಿಯಮಗಳನ್ನು ಪಾಲಿಸಿಲ್ಲ. ಅಲ್ಲದೆ, ಸ್ವಯಂ ಪ್ರೇರಿತ ಹೇಳಿಕೆಗಳ ಆಧಾರದಲ್ಲಿ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಆದರೆ, ಎನ್ಡಿಪಿಎಸ್ ಕಾಯ್ದೆಯ ಪ್ರಕಾರ ಅಧಿಕಾರಿಗಳ ಮುಂದೆ ದಾಖಲಾದ ಹೇಳಿಕೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.