ಹೈಕೋರ್ಟ್​  
ರಾಜ್ಯ

ದಂಪತಿಯ ನಡುವಿನ ಸಣ್ಣಪುಟ್ಟ ಜಗಳಗಳು ಕ್ರೌರ್ಯವಲ್ಲ| High court

ಬೆಂಗಳೂರು: ದಂಪತಿಯ ನಡುವೆ ನಡೆಯುವ ಸಣ್ಣಪುಟ್ಟ ಕೌಟುಂಬಿಕ ಜಗಳಗಳು ಜೀವನದ ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಕ್ರೌರ್ಯ ಎಂದು ಪರಿಗಣಿಸಿ ವಿಚ್ಛೇದನ ನೀಡಲಾಗುದು ಎಂದು ಹೈಕೋರ್ಟ್​ ಹೇಳಿದೆ.
ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ 2016ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಜಯಂತ್​ ಬ್ಯಾನರ್ಜಿ ಮತ್ತು ಕೆ. ರಾಜೇಶ್​ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ತೀರ್ಪು ನೀಡಿದೆ. ದಂಪತಿಗಳು ಜತೆಯಾಗಿ ಬಾಳಲು ಅಸಾಧ್ಯವಾಗುವಂತಹ ಗಂಭೀರ ಪರಿಸ್ಥಿತಿ ಇದ್ದಾಗ ಮಾತ್ರ ಅದನ್ನು ಕ್ರೌರ್ಯ ಎನ್ನಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಬಾಣಸವಾಡಿಯಲ್ಲಿ 2003ರಲ್ಲಿ ದಂಪತಿಯು ವಿವಾಹವಾಗಿದ್ದರು. ಈ ದಂಪತಿಗೆ 2006ರಲ್ಲಿ ಗಂಡು ಮಗು ಜನಿಸಿತ್ತು. ಆದರೆ, ಮದುವೆಯಾದ ದಿನದಿಂದಲೂ ಪತಿ ಮತ್ತು ಆತನ ತಾಯಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ದೈಹಿಕವಾಗಿ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಪತ್ನಿಯು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಮೇಲಿನ ಆರೋಪಗಳನ್ನು ಪತಿ ನಿರಾಕರಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಇದನ್ನು ಪತ್ನಿಯು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.
ಉಭಯ ಪಕ್ಷಗಾರರ ವಾದ ಆಲಿಸಿದ ವಿಭಾಗೀಯ ನ್ಯಾಯಪೀಠ, ಪತ್ನಿಯು ತಾನು ಮಾಡಿರುವ ಆರೋಪಗಳಿಗೆ ಯಾವುದೇ ಸ್ಪಷ್ಟ ಪುರಾವೆ ಒದಗಿಸಿಲ್ಲ. ಪತಿಯು ಸಲ್ಲಿಸಿದ ದಾಖಲೆಗಳ ಪ್ರಕಾರ ಸಾಬೀತಾಗಿದೆ. ಅಲ್ಲದೆ, ಪತಿ ತನಗೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ಪತ್ನಿಯೂ ಒಪ್ಪಿಕೊಂಡಿದ್ದಾರೆ. ಪತಿಯು ಜವಾಬ್ದಾರಿಯುತವಾಗಿ ಕುಟುಂಬವನ್ನು ನೋಡಿಕೊಂಡಿದ್ದು, ಪತ್ನಿಯೇ ಯಾವುದೇ ಬಲವಾದ ಕಾರಣವಿಲ್ಲದೆ ವೈವಾಹಿಕ ಜೀವನದಿಂದ ದೂರ ಸರಿದಿದ್ದಾರೆ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ವ್ಯಾಖ್ಯಾನವೇನು?:

ಕೌಟುಂಬಿಕ ಕ್ರೌರ್ಯದ ಬಗ್ಗೆ ಸುಪ್ರೀಂಕೋರ್ಟ್​ ನೀಡಿರುವ ವ್ಯಾಖ್ಯಾನವನ್ನು ಹೈಕೋರ್ಟ್​ ತನ್ನ ತೀರ್ಪಿನಲ್ಲಿ  ಉಲ್ಲೇಖಿಸಿದೆ. ವೈವಾಹಿಕ ಜೀವನದಲ್ಲಿ ಕ್ರೌರ್ಯ ಎಂದರೆ ಅದು ದೈಹಿಕ ಅಥವಾ ಮಾನಸಿಕವಾಗಿ ಜೀವಕ್ಕೆ, ಆರೋಗ್ಯಕ್ಕೆ ಅಥವಾ ಅಂಗಾಂಗಗಳಿಗೆ ಹಾನಿ ಉಂಟುಮಾಡುವ ಭೀತಿಯನ್ನು ಮೂಡಿಸುವಂತಿರಬೇಕು. ಕೇವಲ ಸಣ್ಣಪುಟ್ಟ ಕೌಟುಂಬಿಕ ಭಿನ್ನಾಭಿಪ್ರಾಯಗಳು ಅಥವಾ ಅರ್ಜಿದಾರರ ಅತಿಯಾದ ಸೂಕ್ಷ್ಮ ಮನಸ್ಥಿತಿಯ ಆಧಾರದ ಮೇಲೆ ಕ್ರೌರ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.