- ಆರೋಪಿಗಳಿಂದ ಲೋಪದೋಷಗಳ ಬಳಕೆ ಹೆಚ್ಚುತ್ತಿದೆ ಎಂದು ಅವಲೋಕನ
ಬೆಂಗಳೂರು: ಕಾನೂನಿನಲ್ಲಿರುವ ಕೆಲವೊಂದು ಲೋಪದೋಷಗಳನ್ನು ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಪ್ರಯತ್ನಿಸುತ್ತಾರೆ. ಆದ್ದರಿಂದ, ಅದನ್ನು ತಡೆಯಬೇಕಾದರೆ ಅಪರಾಧಗಳು ವಿಕಾಸವಾದಂತೆಯೇ ಕಾನೂನು ಕೂಡ ವಿಕಸನಗೊಳ್ಳಬೇಕಿದೆ ಎಂದು ಹೈಕೋರ್ಟ್ ಹೇಳಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ತನ್ನ ವಿರುದ್ಧ ಸಲ್ಲಿಸಿರುವ ಚಾರ್ಜ್ಶೀಟ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಪ್ರಮುಖ ಆರೋಪಿ ದೆಹಲಿ ಮೂಲದ ಗುರುಪ್ರೀತ್ ಸಿಂಗ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ಆರೋಪಿ ಪರ ವಾದಿಸಿದ ವಕೀಲರು, ಅರ್ಜಿದಾರರ ವಿರುದ್ಧ ಇರುವ ಆರೋಪಗಳನ್ನು ನೋಡಿದರೆ ಕಟ್ಟುಕತೆಯಂತೆ ಇದೆ. ಇಂತಹ ಪ್ರವೃತ್ತಿಗೆ ಒಂದು ಮಿತಿಯಿರಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಆರ್ಐ ಪರ ವಕೀಲರು, ಆರೋಪಿಯ ವಿರುದ್ಧ ಸೂಕ್ತ ದಾಖಲೆಗಳಿರುವುದರಿಂದಲೇ ಆತನ ವಿರುದ್ಧ ಚಾರ್ಜ್ಶಿಟ್ ದಾಖಲಿಸಲಾಗಿದೆ. ತನಿಖಾ ಸಂಸ್ಥೆಯು ಆತನ ಮನೆ ಮೇಲೆ ದಾಳಿ ಮಾಡಿದಾಗ ಮಾದಕ ವಸ್ತುಗಳ ಸಾಗಣೆಗೆ ಸಂಬಂಧಿಸಿದ 1 ಕೋಟಿ ರೂಪಾಯಿಗೂ ಅಧಿಕ ನಗದು, ಹಣ ಎಣಿಸುವ ಯಂತ್ರ ಮತ್ತು ಹವಾಲಾ ಜಾಲದ ಮಾಹಿತಿಯಿರುವ 6 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಹೈಡ್ರೋಪೋನಿಕ್ ಗಾಂಜಾಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ತಿಳಿಸಿದರು.
ಬದಲಾವಣೆಗೆ ಸೂಕ್ತ ಸಮಯ:
ಉಭಯ ಪಕ್ಷಗಾರರ ವಾದದ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ತನಿಖಾ ಸಂಸ್ಥೆಗಳು ಸರಿಯಾಗಿ ನಿಯಮ ಪಾಲಿಸಿದರೆ ಯಾವ ಕೋರ್ಟ್ಗಳು ಕೂಡ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅಲ್ಲದೆ, ಅಪರಾಧಗಳಲ್ಲಿ ಕೂಡ ವಿಕಸನಗಳಾಗುತ್ತಿದ್ದು, ಅದಕ್ಕೆ ಸರಿಯಾಗಿ ಕಾನೂನು ಕೂಡ ವಿಕಸನವಾಗಬೇಕು. ಇಲ್ಲವಾದಲ್ಲಿ ನಿಯಮಗಳಲ್ಲಿ ಲೋಪದೋಷ ಹುಡುಕುವ ಮೂಲಕ ಆರೋಪಿಗಳು ತಪ್ಪಿಸಲು ಪ್ರಯತ್ನಿಸುತ್ತಾರೆ. ಮಾದಕ ವಸ್ತು ನಿಯಂತ್ರಣ ಕಾಯ್ದೆಯಲ್ಲಿ (ಎನ್ಡಿಪಿಎಸ್) ಕೆಲವೊಂದು ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಇದು ಸೂಕ್ತ ಸಮಯ ಎಂದು ಅವಲೋಕನ ಮಾಡಿತು. ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಡಿಆರ್ಐ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು. 29ಕ್ಕೆ ಮುಂದೂಡಿತು.
ℹ️ ಪ್ರಕರಣದ ಹಿನ್ನೆಲೆ
ದುಬೈನಲ್ಲಿ ನೆಲೆಸಿರುವ ಹರ್ಪ್ರೀತ್ ಸಿಂಗ್ ಎಂಬಾತ ಬ್ಯಾಂಕಾಕ್ ಮತ್ತಿತರ ದೇಶಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಭಾರತಕ್ಕೆ ಸಾಗಿಸುತ್ತಿದ್ದ. ಆತನ ಸಹೋದರನಾದ ಗುರುಪ್ರೀತ್ ಸಿಂಗ್ ಭಾರತದಲ್ಲಿ ಹಣಕಾಸಿನ ವ್ಯವಹಾರ ಮತ್ತು ಸಾಗಾಟದ ಹೊಣೆ ಹೊತ್ತುಕೊಂಡಿದ್ದ. ಈ ವಹಿವಾಟುಗಳಿಗೆ ಹವಾಲಾ ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕ ಪಾವತಿ ಮಾಡಲಾಗುತ್ತಿತ್ತು ಎಂಬುದು ಡಿಆರ್ಐ ಪತ್ತೆ ಮಾಡಿತ್ತು. ದೆಹಲಿಯಲ್ಲಿರುವ ಗುರುಪ್ರೀತ್ ಸಿಂಗ್ ಮನೆ ಮೇಲೆ ಡಿಆರ್ಐ ಅಧಿಕಾರಿಗಳು ದಾಳಿ ನಡೆಸಿದಾಗ 1.2 ಕೋಟಿ ರೂಪಾಯಿ ನಗದು ಮತ್ತು ಹಲವು ದೇಶಗಳ ವಿದೇಶಿ ಕರೆನ್ಸಿಗಳು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದೇಶದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದ ಡಿಆರ್ಐ 60 ಕೆ.ಜಿ. ಗೂ ಅಧಿಕ ಹೈಡ್ರೋಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದರು. ಈ ಪ್ರಕರಣ ರದ್ದುಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.