- ಬಿಡಬ್ಲ್ಯುಎಸ್ಎಸ್ಬಿ ಅಧಿಕಾರ ವ್ಯಾಪ್ತಿ ಎತ್ತಿಹಿಡಿದ ಹೈಕೋರ್ಟ್
- ನಷ್ಟ ಪರಿಹಾರಕ್ಕೆ ಮಾತ್ರ ಅವಕಾಶ
ಬೆಂಗಳೂರು: ನಗರದ ನಾಗರಿಕರ ಹಿತದೃಷ್ಟಿಯಿಂದ ಕೈಗೊಳ್ಳುವ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗಾಗಿ ಖಾಸಗಿ ಜಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸದೆಯೇ ಒಳಚರಂಡಿ ಹಾಗೂ ನೀರಿನ ಪೈಪ್ಲೈನ್ಗಳನ್ನು ಅಳವಡಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯುಎಸ್ಎಸ್ಬಿ) ಇರುವ ಅಧಿಕಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಖಾಸಗಿ ಮಾಲೀಕರ ಒಪ್ಪಿಗೆಯಿಲ್ಲದಿದ್ದರೂ ಅವರ ಜಾಗದ ಅಡಿಯಲ್ಲಿ ಪೈಪ್ಲೈನ್ ಅಳವಡಿಸಲು ಅವಕಾಶ ಮಾಡಿಕೊಡುವ ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಸೆಕ್ಷನ್ 77ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಕಾಯ್ದೆಯ ಅಡಿಯಲ್ಲಿ ಜಾಗದ ಮಾಲೀಕತ್ವವು ಖಾಸಗಿಯವರ ಬಳಿಯೇ ಇರಲಿದ್ದು, ಪೈಪ್ಲೈನ್ ನಿರ್ವಹಣೆಯ ಹಕ್ಕು ಮಾತ್ರ ಮಂಡಳಿಗೆ ಸಿಗಲಿದೆ. ಇದು ಸಂವಿಧಾನ ನೀಡಿರುವ ಆಸ್ತಿ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಆದರೆ, ಕಾಮಗಾರಿ ಸಂದರ್ಭದಲ್ಲಿ ಜಾಗಕ್ಕೆ ಅಥವಾ ಮೇಲ್ಮೆಗೆ ಯಾವುದೇ ನಷ್ಟ ಉಂಟಾಗಿದ್ದರೆ ಅದಕ್ಕೆ ಸೂಕ್ತ ಪರಿಹಾರ ಪಡೆಯಲು ಮಾಲೀಕರಿಗೆ ಹಕ್ಕಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಹಿಂದಿನ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಬಿಡಬ್ಲ್ಯುಎಸ್ಎಸ್ಬಿ ಪರ ನೀಡಿರುವ ತೀರ್ಪುಗಳನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಮಂಡಳಿಗಿರುವ ಅಧಿಕಾರ ವ್ಯಾಪ್ತಿಯನ್ನು ಎತ್ತಿಹಿಡಿದಿದೆ.
ಭೂಮಾಲೀಕರ ಪರ ವಾದ ಮಂಡಿಸಿದ್ದ ವಕೀಲರು, ಪೈಪ್ಲೈನ್ ಅಳವಡಿಸಿದ ಜಾಗದ ಸುತ್ತಲೂ ಯಾವುದೇ ಕಟ್ಟಡ ನಿರ್ಮಿಸದಂತೆ ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಸೆಕ್ಷನ್ 76ರ ಅಡಿಯಲ್ಲಿ ರ್ನಿಬಂಧ ವಿಧಿಸಲಾಗುತ್ತದೆ. ಇದು ಮಾಲೀಕರ ಜಮೀನು ಅಭಿವೃದ್ಧಿಯ ಹಕ್ಕನ್ನು ಕಸಿದುಕೊಳ್ಳುವುದರಿಂದ, ಮಂಡಳಿಯು ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಿ ಅಧಿಕೃತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ವಾದಿಸಿದ್ದರು.
ಭೂಸ್ವಾಧಿನದಿಂದ ಸಮಸ್ಯೆ:
ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ್ದ ಮಂಡಳಿ ಪರ ವಕೀಲರು, ನಗರದಾದ್ಯಂತ ಲೇಔಟ್ಗಳಲ್ಲಿ ಪೈಪ್ ಅಳವಡಿಸಲು ಪ್ರತಿ ಬಾರಿಯೂ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಾ ಹೋದರೆ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಇದು ಕೇವಲ ಜಾಗದ ಬಳಕೆಯ ಹಕ್ಕಾಗಿದ್ದು, ಕಾಯ್ದೆಯಡಿ ಕಾಮಗಾರಿಯಿಂದಾಗುವ ನಷ್ಟಕ್ಕೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ ಎಂದು ತಿಳಿಸಿದ್ದರು.