High court 
ರಾಜ್ಯ

ಬಾಲ ಭಿಕ್ಷಾಟನೆ ನಿಮೂರ್ಲನೆಗೆ ಕ್ರಿಯಾ ಯೋಜನೆ| High court

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ
  • ಇಲಾಖೆಗಳ ಸಮನ್ವಯಕ್ಕಾಗಿ ನೋಡಲ್​ ಅಧಿಕಾರಿ ನೇಮಕ
ಬೆಂಗಳೂರು: ರಾಜ್ಯದಲ್ಲಿ ಬಾಲ  ಭಿಕ್ಷಾಟನೆಯನ್ನು ನಿಮೂರ್ಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ನೋಡಲ್​ ಅಧಿಕಾರಿಯನ್ನು ನೇಮಿಸುವಂತೆ ಮತ್ತು ಕ್ರಿಯಾ ಯೋಜನೆ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ.
ನಗರದ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಆಟಿಕೆ, ಹೂವು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಕೋರಿ ಲೆಟ್ಜ್​ಕಿಟ್​ ಫೌಂಡೇಷನ್​ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಲಯ ಈ ಆದೇಶ ನೀಡಿದೆ. 
ಬಾಲ ಭಿಕ್ಷಾಟನೆಯನ್ನು ನಿಮೂರ್ಲನೆ ಮಾಡುವ ಕುರಿತಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನೀಡಿರುವ ಶಿಫಾರಸುಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿದೆ.
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಆರು ವರ್ಗಗಳಲ್ಲಿ ಗುರುತಿಸಲಾಗಿದೆ ಎಂದು ಪ್ರಾಧಿಕಾರವನ್ನು ಪ್ರತಿನಿಧಿಸಿದ್ದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಗುಂಪು  ಭಿಕ್ಷಾಟನೆ, ಕೌಟುಂಬಿಕ ವ್ಯವಹಾರಗಳಲ್ಲಿನ ಮಕ್ಕಳು, ಕೂಲಿ ಅಥವಾ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವವರು, ಅಂಗವಿಕಲ ಮಕ್ಕಳ  ಭಿಕ್ಷಾಟನೆ, ತಾಯಂದಿರ ಜತೆ ಹಸುಗೂಸುಗಳ ಬಳಕೆ ಮತ್ತು ಮಾಫಿಯಾಗಳ ಮೂಲಕ ಬಲವಂತವಾಗಿ  ಭಿಕ್ಷಾಟನೆಗೆ ದೂಡಲ್ಪಟ್ಟ ಮಕ್ಕಳು ಇದ್ದಾರೆ ಎಂದು ಗುರುತಿಸಲಾಗಿದೆ.
ಈ  ಭಿಕ್ಷಾಟನೆಯಿಂದ ರಕ್ಷಿಸಿ ಅವರ ಹಿತರಕ್ಷಣೆಗಾಗಿ ತಾತ್ಕಾಲಿಕ ಶಾಲೆ, ಅಂಗನವಾಡಿಗಳನ್ನು ಸ್ಥಾಪಿಸಬೇಕು. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪೊಲೀಸ್​ ಇಲಾಖೆ ಗುಪ್ತ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕು ಎಂದು ಪ್ರಾಧಿಕಾರವು ಶಿಾರಸು ಮಾಡಿದೆ.

6 ವಾರಗಳಲ್ಲಿ ಸಲ್ಲಿಸಿ: 

ಪ್ರಾಧಿಕಾರದ ಶಿಫಾರಸುಗಳನ್ನು ಗಮನಿಸಿದ ನ್ಯಾಯಪೀಠ, ಇದರ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಬೇಕಾಗಿದೆ. ಅದಕ್ಕಾಗಿ ನೋಡಲ್​ ಅಧಿಕಾರಿಯ ಅಗತ್ಯವಿದೆ. ಆದ್ದರಿಂದ ಪ್ರಾಧಿಕಾರದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಶಿಫಾರಸುಗಳನ್ನು ಜಾರಿಗೆ ತರಲು ತೆಗೆದುಕೊಳ್ಳಲಿರುವ ಕ್ರಮಗಳು ಮತ್ತು ಈ ಕುರಿತ ಕ್ರಿಯಾ ಯೋಜನೆಯನ್ನು 6 ವಾರಗಳಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ಮಾಡಿದೆ. ಮುಂದಿನ ವಿಚಾರಣೆ ಏ. 1ಕ್ಕೆ ನಿಗದಿಯಾಗಿದೆ.