- 100ಕ್ಕೂ ಅಧಿಕ ಕಾರ್ಮಿಕರಿರುವ ಸಂಸ್ಥೆಗಳಿಗೆ ಅನ್ವಯ
ಬೆಂಗಳೂರು: ಕಾರ್ಖಾನೆಗಳಲ್ಲಿ ಲೇ ಆಫ್ ಮತ್ತು ಕಾರ್ಮಿಕರ ವಜಾ ಪ್ರಕ್ರಿಯೆಯನ್ನು ನಿರ್ಧರಿಸುವಾಗ ತಾತ್ಕಾಲಿಕ, ದಿನಗೂಲಿ ಮತ್ತು ಗುತ್ತಿಗೆ ಕಾರ್ಮಿಕರನ್ನು ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಪರಿಗಣಿಸಬೇಕು. ಅಲ್ಲದೆ, ಕಾರ್ಮಿಕರ ಸಂಖ್ಯೆ 100ಕ್ಕೂ ಅಧಿಕ ಇದ್ದರೆ ಲೇ ಆಫ್ಗೂ ಮುನ್ನ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಂಡ್ಯದ ತೂಬಿನಕೆರೆಯಲ್ಲಿರುವ ಕರ್ನಾಟಕ ಮಲ್ಲಾಡಿ ಬಯೋಟಿಕ್ಸ್ ಕಂಪನಿಯು 2009ರಲ್ಲಿ 84 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕಾರ್ಮಿಕ ಸಂಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಸ್.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಕಂಪನಿ ಪರವಾಗಿ ತೀರ್ಪು ನೀಡಿದ್ದ ಕೈಗಾರಿಕಾ ನ್ಯಾಯಮಂಡಳಿ ಮತ್ತು ಏಕಸದಸ್ಯ ನ್ಯಾಯಪೀಠದ ತೀರ್ಪುಗಳನ್ನು ನ್ಯಾಯಪೀಠ ರದ್ದುಗೊಳಿಸಿದೆ. ಕಂಪನಿಯ ಕ್ರಮವು ಕಾನೂನುಬಾಹಿರವಾಗಿದೆ. ವಜಾಗೊಂಡ ಪ್ರತಿಯೊಬ್ಬ ಕಾರ್ಮಿಕನಿಗೆ ತಲಾ 3 ಲಕ್ಷ ರೂ. ಪರಿಹಾರಧನವನ್ನು ಎರಡು ತಿಂಗಳೊಳಗೆ ನೀಡುವಂತೆ ನಿರ್ದೇಶನ ನೀಡಿದೆ.
ಕೈಗಾರಿಕಾ ವಿವಾದಗಳ ಕಾಯ್ದೆಯ ನಿಯಮಾನುಸಾರ 100 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಸಂಸ್ಥೆಯು ಲೇ ಆ್ ಅಥವಾ ವಜಾ ಪ್ರಕ್ರಿಯೆ ಕೈಗೊಳ್ಳುವ ಮೊದಲು ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಕಾರ್ಖಾನೆಯಲ್ಲಿ ಒಟ್ಟು 92 ಕಾಯಂ ಕಾರ್ಮಿಕರು ಮಾತ್ರ ಇದ್ದಿದ್ದರಿಂದ, ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರಲಿಲ್ಲ ಎಂದು ಕಂಪನಿ ವಾದಿಸಿತ್ತು.
ಕಾರ್ಮಿಕರ ವೇತನ ಒಪ್ಪಂದಕ್ಕೆ ಸಂಬಂಧಿಸಿ ಕಾರ್ಮಿಕ ಸಂಘಟನೆ ಮತ್ತು ಆಡಳಿತ ಮಂಡಳಿ ನಡುವಿನ ವಿವಾದ ಏರ್ಪಟ್ಟ ನಂತರ 84 ಕಾರ್ಮಿಕರನ್ನು ವಜಾಗೊಳಿಸಲಾಗಿತ್ತು.
ನ್ಯಾಯಾಲಯದ ವ್ಯಾಖ್ಯಾನವೇನು?:
ಕಾರ್ಖಾನೆಯಲ್ಲಿ 92 ಕಾಯಂ ಕಾರ್ಮಿಕರ ಹೊರತಾಗಿ 17 ಭದ್ರತಾ ಸಿಬ್ಬಂದಿ ಹಾಗೂ 28 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿಯಮಾವಳಿಗಳ ಅಡಿಯಲ್ಲಿ ಇವರೆಲ್ಲರೂ "ಕಾರ್ಮಿಕ' ವ್ಯಾಪ್ತಿಗೆ ಬರುವುದರಿಂದ ಸಂಸ್ಥೆಯ ಒಟ್ಟು ಕಾರ್ಮಿಕರ ಸಂಖ್ಯೆಯು 100ರ ಗಡಿ ದಾಟುತ್ತದೆ. ಆದ್ದರಿಂದ ವಜಾ ಮಾಡುವ ಮೊದಲು ಸರ್ಕಾರದ ಅನುಮತಿ ಪಡೆಯದ ಕಂಪನಿಯ ಕ್ರಮವು ಕಾನೂನುಬಾಹಿರ ಎಂದು ನ್ಯಾಯಪೀಠ ತೀರ್ಪು ನೀಡಿದೆ.