- ಸುದ್ದಿ ಪ್ರಸಾರ ಮಾಧ್ಯಮಗಳ ಸಾಂವಿಧಾನದತ್ತ ಹಕ್ಕು, ಹೈಕೋರ್ಟ್ ತೀರ್ಪು
- 2 ಮಾಧ್ಯಮ ಸಂಸ್ಥೆ ಮಾಲೀಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದು
ಬೆಂಗಳೂರು: ನ್ಯಾಯಾಲಯದ ನಡಾವಳಿ ಮತ್ತು ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತಾದ ಸತ್ಯಾಂಶ ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಸಂವಿಧಾನದತ್ತವಾಗಿ ದೊರಕ್ಕಿದ್ದು, ಅಂತಹ ವರದಿಗಾರಿಕೆಯನ್ನು ಮಾನನಷ್ಟ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಕಾರಣಕ್ಕೆ ಮಂಗಳೂರು ಮೂಲದ ಎರಡು ಮಾಧ್ಯಮ ಸಂಸ್ಥೆಗಳ ಮಾಲೀಕರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
11 ವರ್ಷದ ಹಳೇ ಪ್ರಕರಣ
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಮತ್ತು ಹಲ್ಲೆ ದೂರಿಗೆ ಸಂಬಂಧಿಸಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಮಂಡ್ಯ ಮೂಲದ ಬಿ. ಮಂಜುನಾಥ್ ಎಂಬಾತನನ್ನು ಬಂಧಿಸಿದ್ದರು. ಈ ಬಂಧನ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ಪ್ರಕ್ರಿಯೆಗಳನ್ನು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮ ವರದಿಯಿಂದ ಮಾನನಷ್ಟವಾಗಿದೆ ಎಂದು ಮಾಧ್ಯಮ ಸಂಸ್ಥೆಗಳ ಮಾಲೀಕರ ವಿರುದ್ಧ ಮಂಡ್ಯದ ಮ್ಯಾಜಿಸ್ಟ್ರೆಟ್ ನ್ಯಾಯಾಲಯದಲ್ಲಿ ಆರೋಪಿ ಖಾಸಗಿ ದೂರು ದಾಖಲಿಸಿದ್ದ. ಈ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಮಾಧ್ಯಮ ಸಂಸ್ಥೆಗಳ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಪ್ರಕರಣದಲ್ಲಿ ಆರೋಪಿ ಬಂಧನಕ್ಕೊಳಗಾಗಿರುವುದು ಮತ್ತು ಆತನ ಮೇಲೆ ಚಾರ್ಜ್ಶೀಟ್ ಸಲ್ಲಿಕೆಯಾಗಿರುವುದು ಅಧಿಕೃತ ದಾಖಲೆಗಳಿಂದ ಸಾಬೀತಾಗಿದೆ. ಹಾಗಿರುವಾಗ ಈ ಘಟನೆಯನ್ನು ವರದಿ ಮಾಡಿದ ಮಾಧ್ಯಮಗಳ ಮೇಲೆ ಮಾನನಷ್ಟ ಆರೋಪ ಹೊರಿಸುವುದು ತರ್ಕಬದ್ಧವಲ್ಲ ಎಂದು ತೀರ್ಪು ನೀಡಿದೆ.
ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ವರದಿ ಮಾಡಲು ಮಾಧ್ಯಮಗಳಿಗೆ ಕಾನೂನಿನಲ್ಲಿ ವಿಶೇಷ ರಕ್ಷಣೆ ಇದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಅಡಿಯಲ್ಲಿ ಬರುವ ವಿನಾಯಿತಿ ಉಲ್ಲೇಖಿಸಿರುವ ನ್ಯಾಯಪೀಠ, ನ್ಯಾಯಾಲಯದ ನಡಾವಳಿ ಬಗ್ಗೆ ಸತ್ಯ ಮತ್ತು ನಿಖರವಾದ ವರದಿ ಪ್ರಕಟಿಸುವುದು ಮಾನನಷ್ಟವಾಗುವುದಿಲ್ಲ. ಇದು ಸಾರ್ವಜನಿಕರಿಗೆ ಮಾಹಿತಿ ನೀಡುವ ಮಾಧ್ಯಮಗಳ ಕರ್ತವ್ಯದ ಭಾಗವಾಗಿದೆ ಎಂದು ಹೇಳಿದೆ.
ಸಂವಿಧಾನವೇ ರಕ್ಷಿಸಿರುವ ಹಕ್ಕು:
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೂಲಕ ಸಂವಿಧಾನವು ರಕ್ಷಿಸಿದೆ. ಆದ್ದರಿಂದ ಈ ಪ್ರಕರಣದಲ್ಲಿ ಮಾನಹಾನಿ ನಡೆದಿದೆ ಎಂದು ಹೇಳಲಾಗದು. ಆರೋಪಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣಾ ಹಂತದಲ್ಲಿದೆ. ಹಾಗಿರುವಾಗ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವುದು ಸರಿಯಲ್ಲ. ಅದೇ ರೀತಿ ವಿಚಾರಣಾ ನ್ಯಾಯಾಲಯವು ಯಾವುದೇ ಸ್ಪಷ್ಟ ಕಾರಣ ನೀಡದೆ, ಯಾಂತ್ರಿಕವಾಗಿ ದೂರನ್ನು ಪರಿಗಣಿಸಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು. ಇದನ್ನು ಹೈಕೋರ್ಟ್ ಪರಿಗಣಿಸಿದೆ.
ಈ ಪ್ರಕರಣದಲ್ಲಿ ಸುದ್ದಿಗೆ ಜವಾಬ್ದಾರರಾದ ಸಂಪಾದಕರು ಅಥವಾ ವರದಿಗಾರರನ್ನು ಬಿಟ್ಟು ಮಾಧ್ಯಮ ಸಂಸ್ಥೆಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿರುವುದು ಆರೋಪಿಯ ದುರುದ್ದೇಶ ತೋರಿಸುತ್ತದೆ. ಮೂಲ ದೂರುದಾರ ಪ್ರಕರಣದಿಂದ ಹಿಂದೆ ಸರಿಯುವಂತೆ ಮಾಡಲು ಮಾನನಷ್ಟ ಪ್ರಕರಣ ಹೂಡುವ ಮೂಲಕ ಒತ್ತಡದ ತಂತ್ರ ಬಳಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.