- ದುಡಿಯುವ ಸಾಮರ್ಥ್ಯವಿರುವ ಪತಿ ಜೀವನಾಂಶ ನೀಡಲೇಬೇಕು
- ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ
ಬೆಂಗಳೂರು: ದುಡಿಯುವ ಸಾಮರ್ಥ್ಯವಿರುವ ಪತಿಯು ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪತ್ನಿಯು ಉದ್ಯೋಗದಲ್ಲಿದ್ದು ವೇತನ ಪಡೆಯುತ್ತಿದ್ದರೂ ಸಹ, ವಿವಾಹದ ನಂತರ ಪತಿಯ ಮನೆಯಲ್ಲಿ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪತ್ನಿಗೆ 20 ಸಾವಿರ ರೂಪಾಯಿ ಜೀವನಾಂಶ ನೀಡಲು ಹೊರಡಿಸಿದ್ದ ಕೌಟುಂಬಿಕ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಆರೋಗ್ಯವಂತ ಪತಿಯು ಕೆಲಸವಿಲ್ಲ ಎಂದು ನೆಪ ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿದೆ. ಪತಿಯ ಆದಾಯ ಮತ್ತು ಆತನ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿದರೆ, ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
2023ರಲ್ಲಿ ಕೆಲಸ ಕಳೆದುಕೊಂಡಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ. ತಂದೆ, ತಾಯಿಯ ಪಿಂಚಣಿ ಮತ್ತು ಉಳಿತಾಯದ ಹಣದಲ್ಲಿ ಜೀವನ ನಡೆಸುತ್ತಿದ್ದೇನೆ. ಪತ್ನಿಯು ಪದವೀಧರೆಯಾಗಿದ್ದು, ಸ್ವಂತ ಆದಾಯ ಹೊಂದಿರುವುದರಿಂದ ಆಕೆಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಪತಿ ವಾದಿಸಿದ್ದರು.
ಆದಾಯದ ವ್ಯತ್ಯಾಸವೇ ಮುಖ್ಯ:
ಪತ್ನಿಯು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 40 ಸಾವಿರ ರೂ. ಗಿಂತ ಹೆಚ್ಚು ವೇತನ ಪಡೆಯುತ್ತಿರುವುದು ನಿಜ. ಆದರೆ, ಪತಿಯು ಈ ಹಿಂದೆ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ ಸುಮಾರು 4.50 ಲಕ್ಷ ರೂ. ಸಂಬಳ ಪಡೆಯುತ್ತಿದ್ದನು. ತೆರಿಗೆ ಪಾವತಿ ದಾಖಲೆಗಳ ಪ್ರಕಾರ, ಆತನ ವಾರ್ಷಿಕ ಆದಾಯ 66 ಲಕ್ಷ ರೂ.ಗಳಿಗೂ ಅಧಿಕವಾಗಿತ್ತು. ಪತಿಯ ಐಷಾರಾಮಿ ಜೀವನಮಟ್ಟಕ್ಕೆ ಹೋಲಿಸಿದರೆ ಪತ್ನಿಯ ವೇತನ ಅತ್ಯಲ್ಪವಾಗಿದ್ದು, ಜೀವನಮಟ್ಟದ ಅಂತರವನ್ನು ಸರಿದೂಗಿಸಲು ಜೀವನಾಂಶ ಅಗತ್ಯ ಎಂದು ಪೀಠ ಹೇಳಿದೆ. ಪತಿ ಯಲಹಂಕದಲ್ಲಿ ಮತ್ತು ಇಂಗ್ಲೆಂಡ್ನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂಬುದನ್ನು ನ್ಯಾಯಪೀಠ ಉಲ್ಲೇಖಿಸಿದೆ.
ℹ️ ಪ್ರಕರಣದ ಹಿನ್ನೆಲೆ
ಪತಿ ಮತ್ತು ಪತ್ನಿ ಇಬ್ಬರೂ ಈ ಮೊದಲೇ ವಿಚ್ಛೇದನ ಪಡೆದವರಾಗಿದ್ದು, 2021ರಲ್ಲಿ ವಿವಾಹವಾಗಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಿದ ಕಾರಣ 2022ರಲ್ಲಿ ಪತ್ನಿ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮಧ್ಯಂತರ ಆದೇಶ ನೀಡಿದ್ದ ಕೌಟುಂಬಿಕ ನ್ಯಾಯಾಲಯ ಮಾಸಿಕ 20 ಸಾವಿರ ರೂ. ಜೀವನಾಂಶ ಪಾವತಿಸಲು ನಿರ್ದೇಶಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.