High court 
ರಾಜ್ಯ

ಇಎಸ್​ಐಸಿ ಕಡ್ಡಾಯ ಸೇವಾ ಬಾಂಡ್​ ಕಾನೂನುಬದ್ಧ| High court

ಪ್ರಮುಖ ಮುಖ್ಯಾಂಶಗಳು

  • ಋಣ ತೀರಿಸುವುದು ಸವಲತ್ತು ಪಡೆದವರ ಜವಾಬ್ದಾರಿ
  • ಸಿಂಧುತ್ವ ಎತ್ತಿಹಿಡಿದ ಹೈಕೋರ್ಟ್​
ಬೆಂಗಳೂರು:
ಎಸ್​ಐಸಿ ವೈದ್ಯಕಿಯ ಸಂಸ್ಥೆಗಳ ಮೂಲಕ ವೈದ್ಯಕೀಯ ಶಿಕ್ಷಣ ಪೂರೈಸಿರುವ ವಿದ್ಯಾರ್ಥಿಗಳು ಸಾರ್ವಜನಿಕ ಸೇವೆ ಸಲ್ಲಿಸಲು ಸಹಿ ಮಾಡಿಕೊಡುವ 'ಕಡ್ಡಾಯ ಸೇವಾ ಬಾಂಡ್​' ಕಾನೂನುಬದ್ಧವಾಗಿದ್ದು, ಇದನ್ನು ಜಾರಿಗೊಳಿಸಲು ಸರ್ಕಾರ ಮತ್ತು ಇಎಸ್​ಐಸಿಗೆ ಸಂಪೂರ್ಣ ಅಧಿಕಾರವಿದೆ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.
ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್​ಐಸಿ) ವೈದ್ಯಕಿಯ ವಿದ್ಯಾರ್ಥಿಗಳಿಂದ ಕಡ್ಡಾಯ ಸೇವಾ ಬಾಂಡ್​ ಪಡೆಯುವುದನ್ನು ತಡೆದಿದ್ದ ಏಕಸದಸ್ಯ ನ್ಯಾಯಪೀಠದ 2020ರ ಆದೇಶವನ್ನು ರದ್ದುಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ತೀರ್ಪು ನೀಡಿದೆ.
ಸರ್ಕಾರವು ವಿದ್ಯಾರ್ಥಿಗಳಿಗೆ ಸಬ್ಸಿಡಿ ದರದಲ್ಲಿ ವೈದ್ಯಕಿಯ ಶಿಕ್ಷಣ ನೀಡಲು ಅಪಾರ ಪ್ರಮಾಣದ ಹಣ ಖರ್ಚು ಮಾಡುತ್ತದೆ. ಈ ಸೌಲಭ್ಯ ಪಡೆದು ವೈದ್ಯರಾದವರು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಆ ಋಣವನ್ನು ತೀರಿಸಬೇಕಾಗುತ್ತದೆ. ಶಿಕ್ಷಣಕ್ಕಾಗಿ ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ಮರುಪಾವತಿಸುವುದು ಹೇಗೆ ಶೋಷಣೆಯಲ್ಲವೋ, ಅದೇ ರೀತಿ ಒಪ್ಪಂದದಂತೆ ಸೇವೆ ಸಲ್ಲಿಸುವುದನ್ನು ಜೀತ ಪದ್ಧತಿ ಅಥವಾ ಬಲವಂತದ ದುಡಿಮೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇಎಸ್​ಐಸಿ ಸಂಸ್ಥೆಯು ಸೇವಾ ಬಾಂಡ್​ ಬರೆಸಿಕೊಳ್ಳುವುದು ಒಪ್ಪಂದ ಪ್ರಕ್ರಿಯೆಯ ಭಾಗವಾಗಿದೆ. ವಿದ್ಯಾರ್ಥಿಗಳಿಗೆ ಈ ಷರತ್ತುಗಳ ಬಗ್ಗೆ ಮೊದಲೇ ಅರಿವಿರುತ್ತದೆ. ಸರ್ಕಾರ ನೀಡುವ ರಿಯಾಯಿತಿ ದರದ ಶಿಕ್ಷಣಕ್ಕೆ ಪ್ರತಿಯಾಗಿ ಸೇವೆ ಸಲ್ಲಿಸುವುದು ಸರ್ಕಾರಕ್ಕೆ ನೀಡುವ ಪ್ರತಿಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಸಡಿಲಗೊಂಡಿರುವ ನಿಯಮಗಳು:

ಆರಂಭದಲ್ಲಿ ವಿದ್ಯಾರ್ಥಿಗಳು ವೈದ್ಯಕಿಯ ಶಿಕ್ಷಣ ಪಡೆದ ನಂತರ 5 ವರ್ಷ ಇಎಸ್​ಐಸಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ತಪ್ಪಿದ್ದಲ್ಲಿ 7.5 ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂಬ ನಿಯಮವಿತ್ತು. ಆದರೆ, ಈ ನಿಯಮಗಳನ್ನು ಸಡಿಲಿಸಲಾಗಿದ್ದು, ಕಡ್ಡಾಯ ಸೇವಾವಧಿಯನ್ನು 1 ವರ್ಷಕ್ಕೆ ಮತ್ತು ದಂಡದ ಮೊತ್ತವನ್ನು 5 ಲಕ್ಷ ರೂ. ಗೆ ಇಳಿಸಲಾಗಿದೆ. ಅಲ್ಲದೆ, ಸೂಕ್ತ ಕಾರಣಗಳಿದ್ದಲ್ಲಿ ಸೇವೆಗೆ ಹಾಜರಾಗಲು ಕಾಲಾವಕಾಶ ಕೋರಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಹಿತಾಸಕ್ತಿ ಮುಖ್ಯ

ಇಎಸ್​ಐಸಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯನ್ನು ನೀಗಿಸಲು ಮತ್ತು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡಲು ಈ ಬಾಂಡ್​ ವ್ಯವಸ್ಥೆ ಅತ್ಯಗತ್ಯ. ಸಂವಿಧಾನವು ವೃತ್ತಿ ಸ್ವಾತಂತ್ರ್ಯವನ್ನು ನೀಡಿದ್ದರೂ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವಿಧಿಸಿರುವ ಇಂತಹ ಷರತ್ತುಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಕೋರ್ಟ್​ ಹೇಳಿದೆ.

ಏನಿದು ವಿವಾದ?:

 ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್​ಐಸಿ ವೈದ್ಯಕಿಯ ಕಾಲೇಜಿನಲ್ಲಿ 2012-13ನೇ ಸಾಲಿನಲ್ಲಿ ಎಂಬಿಬಿಎಸ್​ ಶಿಕ್ಷಣಕ್ಕೆ ಪ್ರವೇಶ ಪಡೆದ 6 ಮಂದಿ ವಿದ್ಯಾರ್ಥಿಗಳು ಇಎಸ್​ಐಸಿ ಸೇವಾ ಬಾಂಡ್​ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ನಾವು ಈಗಾಗಲೇ ರಾಜ್ಯ ಸರ್ಕಾರದ ನಿಯಮದಂತೆ ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸಲು ಬದ್ಧರಾಗಿದ್ದೇವೆ. ಹಾಗಿರುವಾಗ ಇಎಸ್​ಐಸಿ ಸಂಸ್ಥೆಯು ಮತ್ತೆ ಐದು ವರ್ಷ ಕಡ್ಡಾಯ ಸೇವೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ವಾದಿಸಿದ್ದರು. ಇದನ್ನು ಏಕಸದಸ್ಯ ನ್ಯಾಯಪೀಠ ಪರಿಗಣಿಸಿತ್ತು. ಈ ಆದೇಶದ ವಿರುದ್ಧ ಇಎಸ್​ಐಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.