- ಅನಗತ್ಯ ಪರಿಹಾರ ನೀಡುವುದನ್ನು ತಪ್ಪಿಸಲು ಸಹಕಾರಿ
- ಹೈಕೋರ್ಟ್ ಸಲಹೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ತನ್ನ ಬಸ್ಗಳಿಗೆ ಡ್ಯಾಶ್ಕ್ಯಾಮ್ಗಳನ್ನು ಅಳವಡಿಸುವುದನ್ನು ಖರ್ಚು ಎಂದು ಭಾವಿಸದೆ ಹೂಡಿಕೆ ಎಂದು ಪರಿಗಣಿಸಬೇಕು. ಇದು ಅಪಘಾತದ ಪ್ರಕರಣಗಳಲ್ಲಿ ಸಂಸ್ಥೆಯು ಅನಗತ್ಯವಾಗಿ ಭಾರಿ ಮೊತ್ತದ ಪರಿಹಾರ ನೀಡುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೇಜವಾಬ್ದಾರಿ ಚಾಲನೆಯಿಂದ ಇಬ್ಬರ ಸಾವಿಗೆ ಕಾರಣನಾಗಿದ್ದ ಚಾಲಕನನ್ನು ಕೆಲಸಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕೆಂಬ ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅವಲೋಕನ ಮಾಡಿತು. ಪ್ರಕರಣದಲ್ಲಿ 2022ರ ಸೆ.13ರಂದು ತೀರ್ಪು ನೀಡಿರುವ ಹೈಕೋರ್ಟ್ ಕೆಎಸ್ಆರ್ಟಿಸಿಯ ಮೇಲ್ಮನವಿಯನ್ನು ವಜಾಗೊಳಿಸಿದೆ. ಆದರೆ, ಆ ವೇಳೆ ನೀಡಿದ್ದ ಪ್ರಮಾಣಿತ ಕಾರ್ಯವಿಧಾನಗಳ ಪಾಲನೆಯ ವರದಿ ಪರಿಶೀಲಿಸಲು ಪ್ರಕರಣ ಬಾಕಿ ಉಳಿಸಿಕೊಂಡಿದೆ.
ಸಂಸ್ಥೆಯು ಈಗಾಗಲೇ 1,350ಕ್ಕೂ ಹೆಚ್ಚು ಬಸ್ಗಳಲ್ಲಿ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಿದೆ ಮತ್ತು ಉಳಿದ ಬಸ್ಗಳಿಗೂ ಹಂತ-ಹಂತವಾಗಿ ಅಳವಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಡ್ಯಾಶ್ಕ್ಯಾಮ್ ದೃಶ್ಯಾವಳಿಗಳ ನೆರವಿನಿಂದ ಚಾಲಕರ ಮೇಲೆ ಸುಳ್ಳು ಅಪಘಾತದ ಆರೋಪ ಹೊರಿಸಲಾದ ಪ್ರಕರಣಗಳಲ್ಲಿ ಸಂಸ್ಥೆಯು ನಷ್ಟ ಪರಿಹಾರ ಪಾವತಿಸುವುದರಿಂದ ಪಾರಾಗಿದೆ. ಇಂತಹ ಪ್ರಕರಣಗಳು ಶ್ರೀ ಇತ್ಯರ್ಥಗೊಳ್ಳುತ್ತಿವೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು.
ಪ್ರತಿಕ್ರಿಯಿಸಿದ ನ್ಯಾಯಪೀಠ, ಇದರಿಂದ ಒಟ್ಟಾರೆ ಎಷ್ಟು ಹಣ ಉಳಿತಾಯವಾಗಬಹುದು ಎಂಬುದನ್ನು ಊಹಿಸಿ. ಇವೆಲ್ಲವೂ ಹೂಡಿಕೆಗಳೇ ಹೊರತು ವೆಚ್ಚಗಳಲ್ಲ ಎಂದಿತು.
2,550 ಬಸ್ ಗುಜರಿಗೆ:
ಸಂಸ್ಥೆಯ ಬಳಿ ಸದ್ಯ ಸುಮಾರು 8,500 ಬಸ್ಗಳಿದ್ದು, ಅವುಗಳಲ್ಲಿ 2,550 ಬಸ್ಗಳನ್ನು ಶೀಘ್ರದಲ್ಲೇ ಗುಜರಿಗೆ ಹಾಕಲಾಗುವುದು. ಮುಂದೆ ಖರೀದಿಸಲಿರುವ ಹೊಸ ಬಸ್ಗಳ ಟೆಂಡರ್ನಲ್ಲೇ ಡ್ಯಾಶ್ಕ್ಯಾಮ್ಗಳನ್ನು ಕಡ್ಡಾಯಗೊಳಿಸಿ ಷರತ್ತು ವಿಧಿಸಲಾಗುವುದು ಎಂದು ಕೆಎಸ್ಆರ್ಟಿಸಿ High courtಗೆ ತಿಳಿಸಿದೆ.