ಸಾಂದರ್ಭಿಕ ಚಿತ್ರ 
ರಾಜ್ಯ

ಹೋಂಸ್ಟೇಗಳ ಮೇಲೆ ಕಠಿಣ ನಿಗಾ ಅಗತ್ಯ| High court

ಪ್ರಮುಖ ಮುಖ್ಯಾಂಶಗಳು

  • ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ
ಬೆಂಗಳೂರು: ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುವ ಹೋಂಸ್ಟೇಗಳ ಚಟುವಟಿಕೆಗಳ ಮೇಲೆ ಕಠಿಣ ನಿಗಾ ಇಡಬೇಕಾದ ಮತ್ತು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.
ಅಮೆರಿಕ ಪ್ರಜೆಯಾದ ಮಹಿಳೆ ಮೇಳಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಮಾಡಬೇಕು ಎಂದು ಕೋರಿ ಕೊಡಗು ಜಿಲ್ಲೆಯ ಹೋಂಸ್ಟೇಯೊಂದರ ಮಾಲೀಕ ಪಾಲೇಕಂಡ ಪೊನ್ನಪ್ಪ ಅಲಿಯಾಸ್​ ವಿಶಾಲ್​ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಅವರ ವಕೀಲರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವನ್ನು ಗುರುವಾರ ಕೇಳಿಕೊಂಡರು. ಅರ್ಜಿಯ ವಿಚಾರಣೆಯನ್ನು ಸೋಮವಾರ (ಜೂ. 8) ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು,ಅರ್ಜಿದಾರರು ಕೇವಲ ಹೋಂಸ್ಟೇ ಮಾಲೀಕರಾಗಿದ್ದಾರೆಯೇ ವಿನಃ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಉದ್ಯೋಗಿಯಲ್ಲ. ಉದ್ಯೋಗಿಯ ಮೇಲಿನ ಆರೋಪಗಳ ಆಧಾರದ ಮೇಲೆ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಈಗಾಗಲೇ ಹೋಂಸ್ಟೇ ಪರವಾನಗಿಯನ್ನೂ ರದ್ದುಗೊಳಿಸಲಾಗಿದೆ ಎಂದು ವಾದಿಸಿದರು.
ಅಮೆರಿಕ ಪ್ರಜೆಯಾದ ಮಹಿಳೆಯು ಏ.12 ರಂದು ಹೋಂಸ್ಟೇಗೆ ಆಗಮಿಸಿದಾಗ ಆಕೆಗೆ ವೆಲ್ಕಮ್​ ಡ್ರಿಂಕ್​ ನೀಡಲಾಗಿತ್ತು. ಆ ಪಾನೀಯದಲ್ಲಿ ಮಾದಕ ದ್ರವ್ಯವನ್ನು ಬೆರೆಸಲಾಗಿತ್ತು. ಪಾನೀಯವನ್ನು ಕುಡಿದ ನಂತರ ತಾನು ಪ್ರಜ್ಞೆ ತಪ್ಪಿದ್ದಾಗ ಹೋಂಸ್ಟೇ ಉದ್ಯೋಗಿಯು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಜಿಲ್ಲಾಡಳಿತವು ಹೋಂಸ್ಟೇ ಪರವಾನಗಿಯನ್ನು ರದ್ದುಗೊಳಿಸಿದೆ.