- ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಮಾಫಿಸಾಕ್ಷಿಗಳಾಗಿ ಬದಲಾದವರಿಗೆ ನೀಡಲಾದ ಕ್ಷಮಾದಾನವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ನೀಡುವ ಪ್ರಮಾಣಪತ್ರದ ಆಧಾರದಲ್ಲಿ ಸ್ವಯಂಚಾಲಿತವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ. ಕ್ಷಮಾದಾನದ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯವು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಮಾಫಿಸಾಕ್ಷಿಗಳಾಗಿ ಬದಲಾಗಿದ್ದ ಇಬ್ಬರು ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಷರತ್ತು ಉಲ್ಲಂಘನೆ ಆರೋಪದಲ್ಲಿ ಕಾನೂನುಕ್ರಮ ಜರುಗಿಸಲು ಅನುಮತಿ ನಿರಾಕರಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ತೀರ್ಪು ನೀಡಿದೆ.
ಸಿಆರ್ಪಿಸಿ ಸೆಕ್ಷನ್ 308ರ ಅಡಿಯಲ್ಲಿ ಕ್ಷಮಾದಾನ ರದ್ದತಿಯು ಒಂದು ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ಮಾಫಿಸಾಕ್ಷಿಗಳು ಉದ್ದೇಶಪೂರ್ವಕವಾಗಿ ಸತ್ಯ ಮರೆಮಾಚಿದ್ದಾರೆಯೇ ಅಥವಾ ಸುಳ್ಳು ಸಾಕ್ಷ್ಯ ನೀಡಿದ್ದಾರೆಯೇ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಕೇವಲ ತನಿಖಾ ಸಂಸ್ಥೆಯ ಒತ್ತಡಕ್ಕೆ ಮಣಿದು ಈ ಹಿಂದೆ ಹೇಳಿಕೆ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ ಮಾತ್ರಕ್ಕೆ ಅದನ್ನು ಕ್ಷಮಾದಾನದ ಉಲ್ಲಂಘನೆ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಒಂದು ವೇಳೆ ಸುಳ್ಳು ಸಾಕ್ಷ್ಯ ನೀಡುತ್ತಿದ್ದಾರೆ ಎಂದೆನಿಸಿದರೆ, ಅವರ ವಿರುದ್ಧ ಕ್ರಮ ಜರುಗಿಸಲು ಹೈಕೋರ್ಟ್ನ ಅನುಮತಿ ಪಡೆಯಬೇಕು. ಆದರೆ, ಸಿಬಿಐ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿರುವ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.