High court 
ರಾಜ್ಯ

ಸಾಕ್ಷ್ಯಾಧಾರಗಳಿಲ್ಲದೆ ಬ್ಯಾಂಕ್​ ಖಾತೆ ನಿರ್ಬಂಧ ಸಲ್ಲ| High court

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಬ್ಯಾಂಕ್​ಗೆ ಹೈಕೋರ್ಟ್​ ನಿರ್ದೇಶನ
ಬೆಂಗಳೂರು: ತನಿಖಾ ಸಂಸ್ಥೆಗಳಿಂದ ಯಾವುದೇ ಅಧಿಕೃತ ಸೂಚನೆ ಅಥವಾ ವಂಚನೆಯ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳಿಲ್ಲದೆ ಬ್ಯಾಂಕ್​ ಖಾತೆಗಳನ್ನು ನಿರ್ಬಂಧ (ಫ್ರೀಜ್​) ಮಾಡುವುದು ಕಾನೂನುಬಾಹಿರವಾಗಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್​ ಹೇಳಿದೆ.
ತಮ್ಮ ಬ್ಯಾಂಕ್​ ಖಾತೆಯನ್ನು ನಿರ್ಬಂಧಿಸಿದ  ಖಾಸಗಿ ಬ್ಯಾಂಕ್​ನ ಕ್ರಮವನ್ನು ಪ್ರಶ್ನಿಸಿ ದೆಹಲಿ ಮೂಲದ ಉದ್ಯಮಿ ದೀಪಕ್​ ಗುಪ್ತಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ತಕ್ಷಣವೇ ಅರ್ಜಿದಾರರ ಖಾತೆಯ ಮೇಲಿನ ರ್ನಿಬಂಧವನ್ನು ತೆಗೆದುಹಾಕುವಂತೆ ಬ್ಯಾಂಕ್​ಗೆ ಸೂಚಿಸಲಾಗಿದೆ.
ಸೈಬರ್​ ಕೆಂ ಪೋರ್ಟಲ್​ನಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್​ ಈ ಕ್ರಮ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮ್ಯಾಜಿಸ್ಟ್ರೆಟ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದ್ದರಿಂದ ಅವರು ಹೈಕೋರ್ಟ್​ ಮೇಟ್ಟಿಲೇರಿದ್ದರು.
ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಬೆಂಗಳೂರಿನ ಸಿಎಎನ್​ ಕ್ರೈಂ ಪೊಲೀಸರು, ಖಾತೆಯನ್ನು ನಿರ್ಬಂಧಿಸಲು ತಾವು ಬ್ಯಾಂಕ್​ಗೆ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ, ಅರ್ಜಿದಾರರಿಗೂ ಮತ್ತು ಪ್ರಕರಣಕ್ಕೆ ಯಾವುದೇ ನೇರ ಸಂಬಂಧವಿಲ್ಲ ಎಂದು ತಿಳಿಸಿದ್ದರು. 

ಗ್ರಾಹಕರ ಹಕ್ಕಿನ ಉಲ್ಲಂಘನೆ

ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಬ್ಯಾಂಕ್​ ತನ್ನ ಗ್ರಾಹಕರ ಖಾತೆಯನ್ನು ಯಾಂತ್ರಿಕವಾಗಿ ನಿರ್ಬಂಧಿಸುವಂತಿಲ್ಲ. ತನಿಖಾ ಸಂಸ್ಥೆಯಿಂದ ಯಾವುದೇ ಲಿಖಿತ ಸೂಚನೆ ಇಲ್ಲದಿದ್ದರೂ ಅರ್ಜಿದಾರರ ಖಾತೆಯನ್ನು ರ್ನಿಬಂಧಿಸಿರುವುದು ಸರಿಯಲ್ಲ. ಇದು ಅವರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.