- ಎಸ್ಒಪಿ ಪಾಲಿಸಿ ಗಡಿಪಾರು ಮಾಡಲು ಹೈಕೋರ್ಟ್ ನಿರ್ದೇಶನ.
- ಸಂವಿಧಾನದ 22(1) ವಿಧಿ ವಿದೇಶಿಯರಿಗೂ ಅನ್ವಯ.
ಬೆಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ. ಆದರೆ, ಅನಧಿಕೃತವಾಗಿ ದೇಶದಲ್ಲಿ ನೆಲೆಸಿರುವ ಕಾರಣ ಅವರನ್ನು ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಹಸ್ತಾಂತರಿಸುವಂತೆ ನಿರ್ದೇಶನ ನೀಡಿದೆ.
ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದ್ದು, ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ನೈಜೀರಿಯಾ ಪ್ರಜೆಗಳಾದ ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ಮಾಡಿದೆ.
ಅರ್ಜಿದಾರರ ಬಂಧನದ ಕಾರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂನೆಯಾಗಿದೆ. ಆದ್ದರಿಂದ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆದರೆ, ಅನಧಿಕೃತವಾಗಿ ದೇಶದಲ್ಲಿ 10 ವರ್ಷಗಳಿಗೂ ಹೆಚ್ಚುಕಾಲ ನೆಲೆಸಿರುವ ಕಾರಣ ಅವರನ್ನು ಎಫ್ಆರ್ಆರ್ಒಗೆ ಹಸ್ತಾಂತರಿಸಬೇಕು. ಗಡಿಪಾರು ಮಾಡಲು ಇರುವ ಪ್ರಮಾಣಿತ ಕಾರ್ಯವಿಧಾನ ಪಾಲಿಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ದೇಶದ ಸಂವಿಧಾನದ 22(1) ವಿಧಿಯು ನಾಗರಿಕ ಕೇಂದ್ರಿತ ಮಾತ್ರವಲ್ಲದೆ, ವ್ಯಕ್ತಿ ಕೇಂದ್ರಿತವೂ ಆಗಿದೆ. ಆದ್ದರಿಂದ, ಬಂಧನಕ್ಕೆ ಕಾರಣವನ್ನು ತಿಳಿಸಬೇಕು ಎನ್ನುವುದು ಸಾಂವಿಧಾನಿಕ ರಕ್ಷಣೆಯಾಗಿದ್ದು, ಅದು ವಿದೇಶೀಯರಿಗೂ ಅನ್ವಯಿಸುತ್ತದೆ. ಬಂಧನದ ಕಾರಣವನ್ನು ಬಂಧಿತನಿಗೆ ತಿಳಿಸಿದರೆ, ಕಾನೂನಿನ ಪಾಲನೆಯಾಗುತ್ತದೆ. ಬಂಧನದ ಕಾರಣವನ್ನು ತಿಳಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯ ವಿಮರ್ಶಿಸುತ್ತದೆಯೇ ಹೊರತು, ಅದರ ಸರಿ ತಪ್ಪುಗಳನ್ನಲ್ಲ ಎಂದೂ ನ್ಯಾಯಪೀಠ ಹೇಳಿದೆ.
ಈ ರೀತಿಯ ಪ್ರಕರಣಗಳಲ್ಲಿ ವಿದೇಶಿಯರು ಉದ್ದೇಶಪೂರ್ವಕವಾಗಿ ಸಿಲುಕಿ, ಅವಧಿ ಮೀರಿ ದೇಶದಲ್ಲಿ ನೆಲೆಸುವ ಉದ್ದೇಶದಿಂದ ವಿಚಾರಣೆ ಬಾಕಿ ಇರುವ ನೆಪ ಹೇಳುತ್ತಾರೆ ಎಂದು ನ್ಯಾಯಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಆದ್ದರಿಂದ ಇಂತಹವರನ್ನು ಗಡಿಪಾರು ಮಾಡಲು ರಚಿಸಲಾಗಿರುವ ಎಸ್ಒಪಿ ಸೂಕ್ತವಾಗಿದೆ ಎಂದು ಹೇಳಿದೆ.