ಬೆಂಗಳೂರು
: ಮದುವೆಯಾಗುವುದಾಗಿ ಯುವತಿಗೆ ಯಾವುದೇ ಭರವಸೆ ನಾನು ನೀಡಿರಲಿಲ್ಲ. ನಮ್ಮ ನಡುವಿನ ಲೈಂಗಿಕ ಸಂಬಂಧವು ಕೇವಲ ಪರಸ್ಪರ ಸಮ್ಮತಿಯ ಫ್ರೆಂಡ್ಸ್ ವಿತ್ ಬೆನಿಫಿಟ್ ರೀತಿಯದ್ದಾಗಿತ್ತು ಎಂಬ ಆರೋಪಿಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಅಲ್ಪಾವಧಿಯ ಸಂಬಂಧದಲ್ಲಿ ಲೈಂಗಿಕ ಸಂಪರ್ಕಕ್ಕೆ ಸಮ್ಮತ್ತಿ ಇತ್ತೆ ಎಂಬುದು ವಿಚಾರಣೆಯಿಂದ ತಿಳಿದುಬರಬೇಕಾಗಿದೆ. ಆದ್ದರಿಂದ ಅತ್ಯಾಚಾರ ಪ್ರಕರಣ ರದ್ದುಪಡಿಸಲಾಗದು ಎಂದು ಹೇಳಿದೆ.
ಸ್ನೇಹಿತೆ ನೀಡಿದ ದೂರಿನ ಆಧಾರದಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ರದ್ದುಕೋರಿ ಕೇರಳ ಮೂಲದ ವಿಮಲ್ ಕುಮಾರ್ ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಇದು ದೀರ್ಕಾಲದ ಒಡನಾಟದ ಸಂಬಂಧವಲ್ಲ. ಕೇವಲ ಮೂರು ದಿನಗಳ ಅಲ್ಪಾವಧಿಯಲ್ಲಿ ಸಂಭವಿಸಿದ ಟನೆಯಾಗಿದೆ. ಇಲ್ಲಿ ಸಮ್ಮತಿ ಇತ್ತೆ ಅಥವಾ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
ಸಂತ್ರಸ್ತೆಯು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪಿಜಿಯಲ್ಲಿ ವಾಸವಾಗಿದ್ದಾಳೆ. ಆರೋಪಿಯು ಆಕೆಯ ಸ್ನೇಹಿತನಾಗಿದ್ದು, ಚೆನ್ನೆ$ನಲ್ಲಿ ಕೆಲಸದಲ್ಲಿದ್ದಾನೆ. 2024ರ ಏಪ್ರಿಲ್ನಲ್ಲಿ ಬೆಂಗಳೂರಿಗೆ ಬಂದಿದ್ದ ಆತ, ಲಾಡ್ಜ್ವೊಂದರಲ್ಲಿ ತಂಗಿದ್ದ. ಆ ವೇಳೆ ಅಲ್ಲಿಗೆ ಸಂತ್ರಸ್ತೆಯನ್ನು ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ತನ್ನ ಬಯಕೆಗಾಗಿ ನನ್ನನ್ನು ಬಳಸಿಕೊಂಡು ಕೈಬಿಟ್ಟಿದ್ದು, ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದಳು. ತನಿಖೆ ನಡೆಸಿದ ಪೊಲೀಸರು ಚಾರ್ಜ್ಶಿಟ್ ಸಲ್ಲಿಸಿದ್ದಾರೆ. ಅದನ್ನು ರದ್ದುಗೊಳಿಸುವಂತೆ ಆರೋಪಿಯು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.