- ತಂದೆಗೆ ಮಗುವಿನ ಭೇಟಿಯ ಹಕ್ಕು ನೀಡಿದ್ದ ಆದೇಶ ರದ್ದು
- ತಾಯಿಯ ವಾದ ಪರಿಗಣಿಸಿದ ಹೈಕೋರ್ಟ್
ಬೆಂಗಳೂರು: ಮಗುವಿನ ಪಾಲನೆಯ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪಾಲಕರು, ನಂತರ ಮಗುವಿನ ಮೇಲಿನ ಹಕ್ಕುಗಳನ್ನು ಸಾಧಿಸಲು ಅರ್ಹರಲ್ಲ ಎಂದು ಹೈಕೋರ್ಟ್ ಹೇಳಿದೆ. ಮಗುವಿನ ಪಾಲನೆಯ ವಿಷಯದಲ್ಲಿ ಮಧ್ಯಸ್ಥಿಕೆ ಕೇಂದ್ರದಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿ, ನಂತರ ಕೌಟುಂಬಿಕ ನ್ಯಾಯಾಲಯದಲ್ಲಿ ಮಗುವನ್ನು ಭೇಟಿ ಮಾಡುವ ಹಕ್ಕಿಗಾಗಿ ತಂದೆ ಅರ್ಜಿ ಸಲ್ಲಿಸಿದ್ದನ್ನು ಪ್ರಶ್ನಿಸಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ದಂಪತಿಯು 2024ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆದ ಮಾತುಕತೆಯಲ್ಲಿ ಪತಿಯು ಮಗುವಿನ ಭೇಟಿಯ ಹಕ್ಕನ್ನು ಸ್ವಇಚ್ಛೆಯಿಂದ ತ್ಯಜಿಸಿದ್ದರು. ಅಲ್ಲದೆ, ಮಗುವಿನ ಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ತಾಯಿಗೆ ವಹಿಸಿ, ಮಗುವಿನ ಜೀವನದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದರು. ಆದರೆ, ಇದನ್ನು ಉಲ್ಲಂಘಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮಗುವಿನ ಭೇಟಿಯ ಮತ್ತು ಶೈಕ್ಷಣಿಕ ವೆಚ್ಚದ ಹಕ್ಕನ್ನು ಪಡೆದುಕೊಂಡಿದ್ದರು.
ಮಗುವಿನ ಹುಟ್ಟಿನಿಂದಲೂ ತಂದೆಯು ಆತನ ಪಾಲನೆ ಮಾಡುವಲ್ಲಿ, ಭಾವನಾತ್ಮಕ ಬೆಂಬಲ ನೀಡಲು ಮತ್ತು ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವಲ್ಲಿ ಯಾವುದೇ ಆಸಕ್ತಿ ತೋರಿರಲಿಲ್ಲ. ಒಪ್ಪಂದ ಮಾಡಿಕೊಂಡಿದ್ದರೂ ಅದರ ಮಾಹಿತಿ ನೀಡದೆ ಕೌಟುಂಬಿಕ ಕೋರ್ಟ್ನಿಂದ ತಮ್ಮ ಪರ ಆದೇಶ ಪಡೆದುಕೊಂಡಿದ್ದಾರೆ. ಒಪ್ಪಂದ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ತಂದೆಯ ವಿರುದ್ಧ ದಾಖಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯಲಾಗಿತ್ತು. ಅಲ್ಲದೆ, ಅವರಿಗೆ ಈಗಾಗಲೇ ಬೇರೆ ಮದುವೆಯಾಗಿದೆ. ಮಗು ಈಗ ಸುರಕ್ಷಿತ ವಾತವರಣದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಪಡೆಯುತ್ತಿದೆ. ಅಲ್ಲದೆ, ತಾನು ಯಾವುದೇ ಜೀವನಾಂಶ ಕೇಳದೆ ಮಗುವಿನ ಶಾಶ್ವತ ಪಾಲನೆಯ ಹಕ್ಕನ್ನು ಒಪ್ಪಂದದ ಮೂಲಕ ಪಡೆದುಕೊಂಡಿದ್ದೇನೆ ಎಂದು ತಾಯಿ ಹೈಕೋರ್ಟ್ನಲ್ಲಿ ವಾದಿಸಿದ್ದರು. ಇದನ್ನು ಹೈಕೋರ್ಟ್ ಪರಿಗಣಿಸಿದ್ದು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.