- ಇಬ್ಬರು ಆರೋಪಿಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್
- ವಿದೇಶಗಳಿಂದ ಡ್ರಗ್ಸ್ ತರಿಸಿಕೊಂಡ ಆರೋಪ
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಲ ಹೊಂದಿರುವ ಮಾದಕ ದ್ರವ್ಯ ಸಾಗಾಟದಂತಹ ಗಂಭೀರ ಪ್ರಕರಣಗಳಲ್ಲಿ, ಆರೋಪಿಗಳ ವಿರುದ್ಧ ಬಲವಾದ ದಾಖಲೆಗಳು ಲಭ್ಯವಿರುವಾಗ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಫ್ರಾನ್ಸ್ನಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಎಂಡಿಎಂಎ ಮಾತ್ರೆಗಳನ್ನು ತರಿಸಿಕೊಂಡಿದ್ದ ತಮಿಳುನಾಡು ಮೂಲದ ಎಸ್. ಸೆಲ್ವ ಕುಮಾರ್ ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿನ ಕೊರಿಯರ್ ಕೊರಿಯರ್ ಕಂಪನಿಗೆ ಬಂದಿದ್ದ ಅನುಮಾನಾಸ್ಪದ ಪಾರ್ಸೆಲನ್ನು ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ತಪಾಸಣೆ ನಡೆಸಿದಾಗ 34 ಗುಲಾಬಿ ಮತ್ತು 19 ನೀಲಿ ಬಣ್ಣದ ಎಂಡಿಎಂಎ ಮಾತ್ರೆಗಳು ಪತ್ತೆಯಾಗಿದ್ದವು.
ಎನ್ಸಿಬಿ ನಡೆಸಿದ ತನಿಖೆಯಿಂದ ಆರೋಪಿಗಳ ಅಂತಾರಾಷ್ಟ್ರೀಯ ಜಾಲ ಅನಾವರಣಗೊಂಡಿತ್ತು. ಸೆಲ್ವ ಕುಮಾರ್ ಈ ಪಾರ್ಸೆಲ್ ಬುಕ್ ಮಾಡಲು 24,500 ರೂಪಾಯಿಗಳನ್ನು ಡೆಪಾಸಿಟ್ ಮಾಡಿದ್ದನು. ಈತನ ಸಹಚರ ಹರಿ ಬಾಲಮುರುಗನ್ ಎಂಬಾತ ಟೆಲಿಗ್ರಾಮ್ನಲ್ಲಿ ಫ್ರಾನ್ಸ್ ದೇಶದ ಡ್ರಗ್ಸ್ ಪೆಡ್ಲರ್ ಜತೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.
ಬ್ಯಾಂಕ್ ಖಾತೆಗಳ ವಿವರಗಳು ಮತ್ತು ಡಿಜಿಟಲ್ ಸಂಭಾಷಣೆಗಳು ಆರೋಪಿಗಳ ನಡುವಿನ ಅಕ್ರಮ ವ್ಯವಹಾರವನ್ನು ಸಾಬೀತುಪಡಿಸಿವೆ. ಅಲ್ಲದೆ, ಮಾದಕ ದ್ರವ್ಯವನ್ನು ಜಪ್ತಿ ಮಾಡುವಾಗ ಎನ್ಸಿಬಿ ಅಧಿಕಾರಿಗಳು ಎನ್ಡಿಪಿಎಸ್ ಕಾಯ್ದೆಯ ಯಾವುದೇ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ಪರಿಗಣಿಸಿದ ಹೈಕೋರ್ಟ್ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದೆ.
ಪರಾರಿಯಾದವನಿಗೂ ನಿರಾಕರಣೆ:
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ದುಬೈಗೆ ಪರಾರಿಯಾಗಿ, ನಂತರ ಅಲ್ಲಿನ ಪೊಲೀಸರಿಂದ ಬಂಧನಕ್ಕೊಳಗಾಗಿ ಭಾರತಕ್ಕೆ ಹಸ್ತಾಂತರಗೊಂಡಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಕೇರಳಂ ಮೂಲದ ಲಿಜೋ ಜೋಸ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಮೆಕ್ಸಿಕೋದಿಂದ 6.5 ಕೆ.ಜಿ ಲೈಸರ್ಜಿಕ್ ಆ್ಯಸಿಡ್ ಡೈಎಥಿಲಮೈಡ್ (ಎಲ್ಎಸ್ಡಿ) ಎಂಬ ಮಾದಕ ವಸ್ತುವನ್ನು ತರಿಸಿಕೊಂಡ ಆರೋಪ ಈತನ ಮೇಲಿದೆ. ಆರೋಪಿಯು ಈಗಾಗಲೇ ಒಮ್ಮೆ ದೇಶ ಬಿಟ್ಟು ಓಡಿಹೋಗಿದ್ದ ಕಾರಣ ಆ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.