ಬೆಂಗಳೂರು: ಥೈಲ್ಯಾಂಡ್ನಿಂದ ಬೆಂಗಳೂರಿಗೆ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಸರಗೋಡಿನ ಚಾಲಕನೊಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಮಹಮ್ಮದ್ ಜಿದಾನ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ತಾನೊಬ್ಬ ಸಾಮಾನ್ಯ ಚಾಲಕ ಎಂದು ವಾದಿಸಿದ್ದ ಆರೋಪಿಯ ಬ್ಯಾಂಕ್ ಖಾತೆಯಲ್ಲಿ ಲಾಂತರ ರೂಪಾಯಿಗಳ ಶಂಕಾಸ್ಪದ ವಹಿವಾಟು ಮತ್ತು ಪದೇ ಪದೇ ವಿದೇಶಿ ಪ್ರವಾಸ ಮಾಡಿರುವುದು ಪತ್ತೆಯಾಗಿದ್ದು, ಬಂಧಿಸಿ ವಿಚಾರಣೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2025ರ ಫೆ.6ರಂದು ಬ್ಯಾಂಕಾಕ್ನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೈಕಲ್ ಅಲ್ಫೋನ್ಸ್ ಎಂಬಾತನ ಬಳಿಯಿದ್ದ 1.5 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ವಶಪಡಸಿಕೊಂಡು, ಆತನನನ್ನು ಬಂದಿಸಿದ್ದರು. ಅವನ ಹೇಳಿಕೆ ಆಧಾರಿಸಿ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಅತುಲ್ ಮೋಹನ ಎಂಬಾತನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇವರಿಬ್ಬರ ವಿಚಾರಣೆ ವೇಳೆ ಈ ಡ್ರಗ್ಸ್ ದಂಧೆಯ ಹಿಂದೆ ರಾಹುಲ್, ಜ್ನಾಸ್ ಮತ್ತು ಮಹಮ್ಮದ್ ಜಿದಾನ್ ಎಂಬುವವರು ಇರುವ ವಿಚಾರ ಬೆಳಕಿಗೆ ಬಂದಿತ್ತು.
ತಲೆ ಮರೆಸಿಕೊಂಡಿರುವ ಆರೋಪಿ:
ಈ ಪ್ರಕರಣದಲ್ಲಿ ಉಳಿದ ಆರೋಪಿಗಳು ವಿಚಾರಣೆಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರೆ, ಮಹಮ್ಮದ್ ಜಿದಾನ್ ಮಾತ್ರ ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದಾನೆ. ಆರೋಪಿಯು ಕಳೆದ ಐದು ವರ್ಷಗಳಲ್ಲಿ 7 ಬಾರಿ ವಿದೇಶ ಪ್ರವಾಸ ಮಾಡಿದ್ದು, ಅದರಲ್ಲಿ ಥೈಲ್ಯಾಂಡ್ಗೆ 4 ಬಾರಿ ಭೇಟಿ ನೀಡಿದ್ದಾನೆ. ಆತನ ಖಾತೆಯಲ್ಲಿ ಲಾಂತರ ರೂಪಾಯಿಗಳ ಅನುಮಾನಾಸ್ಪದ ವಹಿವಾಟು ನಡೆದಿದೆ ಎಂದು ಎನ್ಸಿಬಿ ವಾದಿಸಿತ್ತು. ಇದನ್ನು ಪರಿಗಣಿಸಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.