High court 
ರಾಜ್ಯ

ಮಕ್ಕಳಾಟದಿಂದ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ| ಶಾಲೆ ವಿರುದ್ಧ ಪ್ರಕರಣ ರದ್ದಿಲ್ಲ| High court

ಬೆಂಗಳೂರು: ಶಾಲಾ ಬಸ್​ನಲ್ಲಿ ಆಟವಾಡುವಾಗ ಸಹಪಾಠಿಗಳು ರಾಸಾಯನಿಕಯುಕ್ತ ಬಣ್ಣ ಎರಚಿದ ಪರಿಣಾಮ ವಿದ್ಯಾರ್ಥಿಯೊಬ್ಬನ ಕಣ್ಣಿನ ದೃಷ್ಟಿ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್​ ನಿರಾಕರಿಸಿದೆ. ಕೇಸ್​ ರದ್ದು ಕೋರಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಮಂಡ್ಯದ ಮದ್ದೂರು ತಾಲೂಕಿನ ಖಾಸಗಿ ಶಾಲೆಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶಾಲೆ ಮತ್ತು ಶಾಲೆಯ ಬಸ್ಸನ್ನು ಪ್ರತ್ಯೇಕವಾಗಿ ನೋಡಲಾಗದು. ಅಲ್ಲಿ ಮಕ್ಕಳ ಸುರಕ್ಷತೆಯನ್ನು ನೋಡಿಕೊಳ್ಳಬೇಕಾದದ್ದು, ಶಾಲಾ ಆಡಳಿತ ಮಂಡಳಿಯ ಶಾಸನಬದ್ಧ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
2025ರ ಆ.1ರಂದು ಶಾಲೆಯಿಂದ ಮನೆಗೆ ಹೋಗುತ್ತಿರುವ ವೇಳೆ ಕೆಲವು ಮಕ್ಕಳು ಬಣ್ಣದ ಕಾನ್ಫೆಟ್ಟಿ&ಸ್ಪಾರ್ಕ್ಲರ್​ಗಳನ್ನು ತಂದು ಶಾಲೆಯ ಬಸ್​ನೊಳಗೆ ಸೆ ಮಾಡಿದ್ದಾರೆ. ಈ ವೇಳೆ ರಾಸಾಯನಿಕ ಮಿಶ್ರಿತ ಬಣ್ಣ 4ನೇ ತರಗತಿಯ ಮಗುವಿನ ಕಣ್ಣಿಗೆ ಸೇರಿದೆ. ಆರಂಭದಲ್ಲಿ ಇದನ್ನು ಮಕ್ಕಳ ತುಂಟಾದ ಎಂದು ಪಾಲಕರು ಕಡೆಗಣಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಮಗುವಿನ ಕಣ್ಣಿಗೆ ತೀವ್ರ ಹಾನಿಯಾಗಿರುವುದು ಬೆಳಕಿಗೆ ಬಂದಿತ್ತು. ವೈದ್ಯರು ತಪಾಸಣೆ ನಡೆಸಿ ಮಗು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದೆ ಎಂದು ದೃಢಪಡಿಸಿದ್ದರು. 
ಮಗುವಿನ ತಾಯಿ 2025ರ ಸೆ. 5ರಂದು ಕೊಪ್ಪ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಾಲಾ ಬಸ್​ನಲ್ಲಿ ಕಡ್ಡಾಯವಾಗಿ ಇರಬೇಕಾದ ನಿರ್ವಾಹಕರು ಇರಲಿಲ್ಲ ಮತ್ತು ಬಸ್​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ, ಇದು ಶಾಲಾ ಆಡಳಿತ ಮಂಡಳಿಯ ಘೋರ ರ್ನಿಲಕ್ಷ$್ಯ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಪ್ರಕರಣ ರದ್ದುಕೋರಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. 

ಬಸ್​ನಲ್ಲಿ ನಿರ್ವಾಹಕರು ಕಡ್ಡಾಯ:

ಶಾಲೆ ಪರ ವಾದಿಸಿದ ವಕೀಲರು, ಇದು ಮಕ್ಕಳ ನಡುವೆ ನಡೆದ ಆಕಸ್ಮಿಕ ಘಟನೆಯಾಗಿದ್ದು, ಶಾಲೆಯ ಸಮಯ ಮುಗಿದ ನಂತರ ನಡೆದಿರುವುದರಿಂದ ಶಾಲಾ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ನಿಯಮಗಳ ಅಡಿಯಲ್ಲಿ ಶಾಲಾ ವಾಹನಗಳಲ್ಲಿ ನಿರ್ವಾಹಕರು ಇರುವುದು ಕಡ್ಡಾಯ. ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿತ್ತೇ ಮತ್ತು ಶಾಲೆಯು ಸುರಕ್ಷತಾ ನಿಯಮಗಳನ್ನು ಪಾಲಿಸಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ ಎಂದು ಹೇಳಿದೆ.