High court 
ರಾಜ್ಯ

ಕಾರು ಚಾಲಕನಿಗೆ ವಿಧಿಸಿದ್ದ ಶಿಕ್ಷೆ ಒಂದು ದಿನಕ್ಕೆ ಇಳಿಕೆ| High court

ಪ್ರಮುಖ ಮುಖ್ಯಾಂಶಗಳು

  • ಅಪಘಾತದ ವೇಳೆಯ ಮಾನವೀಯ ನಡವಳಿಕೆ ಪರಿಗಣಿಸಿದ ಹೈಕೋರ್ಟ್​
  • ದಂಡದ ಮೊತ್ತ 1 ಲಕ್ಷ ರೂ. ಗೆ ಏರಿಕೆ
ಬೆಂಗಳೂರು: ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಚಾಲಕರೊಬ್ಬರಿಗೆ 1 ವರ್ಷದ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿರುವ ಹೈಕೋರ್ಟ್​, ಶಿಕ್ಷೆ ಪ್ರಮಾಣವನ್ನು ಒಂದು ದಿನಕ್ಕೆ ಇಳಿಸಿ ಆದೇಶಿಸಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳದಿಂದ ಪರಾರಿಯಾಗದೆ, ಗಾಯಾಳುವನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ ಚಾಲಕನ ಮಾನವೀಯ ನಡವಳಿಕೆಯನ್ನು ಪರಿಗಣಿಸಿ ಈ ಮಾರ್ಪಾಡು ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಮಂಗಳೂರಿನ ಪಕೆರೆಯ ರಿಯಾಜ್​ ಅಹ್ಮದ್​ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪರಿಷ್ಕರಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಶಿೆಯನ್ನು ಒಂದು ದಿನಕ್ಕೆ ಕಡಿತಗೊಳಿಸಲಾಗಿದ್ದು, ದಂಡದ ಪ್ರಮಾಣವನ್ನು 1 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಒಂದು ವೇಳೆ ದಂಡದ ಪ್ರಮಾಣವನ್ನು ನಿಗದಿತ ಕಾಲಾವಧಿಯಲ್ಲಿ ಪಾವತಿಸದೆ ಹೋದರೆ ವಿಚಾರಣಾ ನ್ಯಾಯಾಲಯದ ಆದೇಶ ಮರುಸ್ಥಾಪನೆಯಾಗಲಿದೆ ಎಂದು ಎಚ್ಚರಿಸಿದೆ.

ಪ್ರಕರಣದ ಹಿನ್ನಲೆ:

2015ರ ಜು. 15ರಂದು ಸಂಜೆ 6.30ರ ಸುಮಾರಿಗೆ ಮಂಗಳೂರು&ಉಡುಪಿ ಹೆದ್ದಾರಿಯಲ್ಲಿ ರಿಜಾಜ್​ ಅಹ್ಮದ್​ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಆನಂದ್​ ಶೆಟ್ಟಿ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೆ ರಿಯಾಜ್​ ತಮ್ಮ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಗಂಭೀರ ಗಾಯದ ಕಾರಣ ಗಾಯಾಳು ಮೃತಪಟ್ಟಿದ್ದರು. ರಿಯಾಜ್​ ವಿರುದ್ಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು 1 ವರ್ಷದ ಸಾದಾ ಜೈಲು ಶಿೆ ಮತ್ತು 5 ಸಾವಿರ ರೂ. ದಂಡ ವಿಧಿಸಿತ್ತು. ಈ ಆದೇಶವನ್ನು ಜಿಲ್ಲಾ ಪ್ರಧಾನ ಸೆಷನ್ಸ್​ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ರಿಯಾಜ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. 

ಆರೋಗ್ಯ ಸ್ಥಿತಿ ಪರಿಗಣನೆ 

ವಿಚಾರಣೆ ವೇಳೆ ರಿಯಾಜ್​ ಪರ ವಾದಿಸಿದ್ದ ವಕೀಲರು, ಅರ್ಜಿದಾರರು ಬೇರೊಂದು ಅಪಘಾತದಲ್ಲಿ ಗಾಯಗೊಂಡಿದ್ದು, ಅವರ ಬಲಗಾಲಿಗೆ ರಾಡ್​ ಅಳವಡಿಸಲಾಗಿದೆ. ಇಂದರಿಂದ ಅವರು ಚಾಲಕನ ಕೆಲಸ ಕಳೆದುಕೊಂಡಿದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಜೀವನ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಮೃತ ವ್ಯಕ್ತಿಯ ಕುಟುಂಬದವರು ಹೆಚ್ಚಿನ ಪರಿಹಾರ ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ, 1 ಲಕ್ಷ ರೂ. ಗಳನ್ನು ಎರಡು ಸಮಾನ ಕಂತುಗಳಲ್ಲಿ ಪಾವತಿಸುವ ಷರತ್ತಿನೊಂದಿಗೆ ಶಿೆಯ ಪ್ರಮಾಣವನ್ನು ಕಡಿತಗೊಳಿಸಿದೆ.