ರಾಜ್ಯಪಾಲರ ಅಮಾನತು ಆದೇಶ ರದ್ದು ಮಾಡಿದ ಹೈಕೋರ್ಟ್​: ಶಿವಶಂಕರಪ್ಪ ಸಾಹುಕಾರ್​ಗೆ ಮತ್ತೆ ಕೆಪಿಎಸ್​ಸಿ ಅಧ್ಯಕ್ಷ ಪಟ್ಟ! KPSC 
ರಾಜ್ಯ

ರಾಜ್ಯಪಾಲರ ಅಮಾನತು ಆದೇಶ ರದ್ದು ಮಾಡಿದ ಹೈಕೋರ್ಟ್​: ಶಿವಶಂಕರಪ್ಪ ಸಾಹುಕಾರ್​ಗೆ ಮತ್ತೆ ಕೆಪಿಎಸ್​ಸಿ ಅಧ್ಯಕ್ಷ ಪಟ್ಟ! KPSC

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮೇಲಿನ ರಾಜ್ಯಪಾಲರ ಅಮಾನತು ಆದೇಶ ರದ್ದು ಮಾಡಿದ ಹೈಕೋರ್ಟ್
  • ಅಮಾನತುಗೊಳಿಸುವ ಮೊದಲು ರಾಜ್ಯ ಸಚಿವ ಸಂಪುಟದ ಸ್ಪಷ್ಟ ಅನುಮತಿ ಪಡೆಯದಿರುವುದು ಕಾನೂನುಬಾಹಿರ ಎಂದ ನ್ಯಾಯಾಲಯ
  • ಆದೇಶದ ಪ್ರತಿ ಸಿಕ್ಕ ಏಳು ದಿನಗಳ ಒಳಗಾಗಿ ಅವರನ್ನು ಮತ್ತೆ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮರುನಿಯೋಜಿಸುವಂತೆ ಹೈಕೋರ್ಟ್ ನಿರ್ದೇಶನ
  • ಪುತ್ರಿಯರ ನೇಮಕಾತಿ ವಿಷಯದ ಪ್ರಮುಖ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಮಾತ್ರ ಅಧ್ಯಕ್ಷರಿಗೆ ಹೈಕೋರ್ಟ್ ತಡೆ
  • ಅವರ ಮೇಲಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳ ಗಂಭೀರ ಆರೋಪಗಳ ತನಿಖೆಗೆ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ( KPSC ) ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಎಸ್. ಸಾಹುಕಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ಮಟ್ಟದ ಕಾನೂನು ಗೆಲುವು ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ನ್ಯಾಯಾಲಯ ಅಧಿಕೃತವಾಗಿ ರದ್ದುಗೊಳಿಸಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಜುಲೈ 10ರಂದು ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಾಹುಕಾರ್ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಅಮಾನತು ಪ್ರಕ್ರಿಯೆಯಲ್ಲಿ ಸಾಂವಿಧಾನಿಕ ನಿಯಮಗಳನ್ನು ಪಾಲಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಸಾವಿಧಾನಿಕ ಹುದ್ದೆಯಲ್ಲಿರುವವರನ್ನು ಅಮಾನತುಗೊಳಿಸುವ ಮೊದಲು ರಾಜ್ಯ ಸಚಿವ ಸಂಪುಟದ ಸ್ಪಷ್ಟ ಅನುಮತಿ ಅಥವಾ ಶಿಫಾರಸು ಕಡ್ಡಾಯವಾಗಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಸಂಪುಟದ ಒಪ್ಪಿಗೆಯಿಲ್ಲದೆ ಏಕಾಏಕಿ ಕ್ರಮ ಕೈಗೊಂಡಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದಾಗಿ ಶಿವಶಂಕರಪ್ಪ ಸಾಹುಕಾರ್ ಅವರ ಮೇಲಿನ ಅಮಾನತು ತೆರವಾಗಿದ್ದು, ಆದೇಶದ ಪ್ರತಿ ಸಿಕ್ಕ 7 ದಿನಗಳ ಒಳಗಾಗಿ ಅವರನ್ನು ಮತ್ತೆ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮರುನಿಯೋಜನೆ ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಇದರಿಂದಾಗಿ ಅವರು ಮತ್ತೆ ತಮ್ಮ ಸ್ಥಾನವನ್ನು ಅಲಂಕರಿಸಲು ಕಾನೂನಾತ್ಮಕವಾಗಿ ಹಾದಿ ಸುಗಮವಾದಂತಾಗಿದೆ.
ಆದಾಗ್ಯೂ, ನ್ಯಾಯಾಲಯವು ಅವರಿಗೆ ಸಂಪೂರ್ಣ ಮುಕ್ತ ವಿನಾಯಿತಿಯನ್ನೇನೂ ನೀಡಿಲ್ಲ. ಸದಸ್ಯರು ಮತ್ತು ಆಯೋಗ ಕೈಗೊಳ್ಳುವ ಕೆಲವು ನಿರ್ಣಯಗಳಿಗೆ ಸಂಬಂಧಿಸಿದಂತೆ, ವಿಶೇಷವಾಗಿ ತಮ್ಮ ಪುತ್ರಿಯರ ನೇಮಕಾತಿ ವಿಷಯಕ್ಕೆ ಬಂದರೆ ಅಂಥ ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಅಥವಾ ಕಡತಗಳ ವಿಲೇವಾರಿಯನ್ನು ಅಧ್ಯಕ್ಷರಾದ ಸಾಹುಕಾರ್ ಅವರು ಕೈಗೊಳ್ಳುವುದಕ್ಕೆ ಹೈಕೋರ್ಟ್ ಸ್ಪಷ್ಟ ತಡೆ ವಿಧಿಸಿದೆ.
ಇನ್ನು ಸಾಹುಕಾರ್ ಅವರ ಮೇಲಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳ ಗಂಭೀರ ಆರೋಪಗಳ ತನಿಖೆಗೆ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಕೇವಲ ಅಮಾನತುಗೊಳಿಸುವಾಗ ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಗಳು ಹಾಗೂ ಸಂಪುಟದ ಅನುಮತಿಯ ಲೋಪದ ಆಧಾರದ ಮೇಲೆ ಮಾತ್ರ ಈ ತೀರ್ಪು ನೀಡಲಾಗಿದ್ದು, ಮುಂದಿನ ತನಿಖೆ ಮುಂದುವರಿಯಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇಡಿ ದಾಳಿ

ಇದೆಲ್ಲ ಒಂದು ಕಡೆಯಾದರೆ, ಹೈಕೋರ್ಟ್​ ತೀರ್ಪು ಬರುವ ಮುನ್ನ ಅಂದರೆ, ಇಂದು ಬೆಳಗ್ಗೆ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್​ ಶಾಕ್​ ನೀಡಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ಶಂಕೆಯ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಶಿವಶಂಕರಪ್ಪ ಅವರ ಫ್ಲಾಟ್ ಸೇರಿದಂತೆ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ. ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಹಾಗೂ ಗುಜರಾತ್‌ನ ಅಹಮದಾಬಾದ್ ಸೇರಿದಂತೆ ಒಟ್ಟು 21 ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೆಗಾ ದಾಳಿ ನಡೆಸಿದ್ದಾರೆ. ಸ್ವತಃ ಕೆಪಿಎಸ್‌ಸಿ ಕಚೇರಿ, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಶಾಂತಾ ಹೊಸಮನಿ, ಹಗರಣದ ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೌಲ್ಯಮಾಪನ ಸಂಸ್ಥೆಯಾದ ‘M/s ಎಡುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಚೇರಿ ಹಾಗೂ ಆಯ್ಕೆಯಾದ ಕೆಲ ಅಭ್ಯರ್ಥಿಗಳ ಮನೆಗಳ ಮೇಲೆ ಸಿಆರ್‌ಪಿಎಫ್ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ.