- ಪತ್ನಿಯ ಮನವಿ ನಿರಾಕರಿಸಿದ್ದ ಫ್ಯಾಮೀಲಿ ಕೋರ್ಟ್ ಆದೇಶ ವಜಾ
- ಆರ್ಥಿಕ ಅಗತ್ಯವಿದ್ದರೆ ನೀಡಲೇಬೇಕು ಎಂದ ನ್ಯಾಯಾಲಯ
ಬೆಂಗಳೂರು: ಪತ್ನಿ ಕೇವಲ ಆರರಿಂದ ಏಳು ತಿಂಗಳು ಮಾತ್ರ ಪತಿಯ ಜತೆಗಿದ್ದಳು ಎಂದು ಜೀವನಾಂಶ ತಿರಸ್ಕರಿಸುವುದು ಸರಿಯಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಮುಖ್ಯ ಉದ್ದೇಶವೇ ಸಂಕಷ್ಟದಲ್ಲಿರುವ ಸಂಗಾತಿಗೆ ಆರ್ಥಿಕ ನೆರವು ನೀಡುವುದು ಮತ್ತು ಕಾನೂನು ಹೋರಾಟ ನಡೆಸಲು ಶಕ್ತಿ ತುಂಬುವುದಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಜೀವನಾಂಶ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ 24 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಡಾ.ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೂರಕ ದಾಖಲೆಗಳನ್ನು ಪರಿಗಣಿಸಿ ಅರ್ಜಿಯನ್ನು ಹೊಸದಾಗಿ ವಿಚಾರಣೆ ನಡೆಸುವುಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಮರಳಿಸಿದೆ.
ಬೆಂಗಳೂರಿನ ಮಹಿಳೆಯು ತನಗೆ ಮಧ್ಯಂತರ ಪರಿಹಾರವಾಗಿ ಮಾಸಿಕ 50 ಸಾವಿರ ರೂ. ಜೀವನಾಂಶ ಮತ್ತು ವ್ಯಾಜ್ಯದ ವೆಚ್ಚವಾಗಿ 1 ಲಕ್ಷ ರೂ. ಕೊಡಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತಿ, ಪತ್ನಿಯು ಕೇವಲ ಆರರಿಂದ ಏಳು ತಿಂಗಳು ಮಾತ್ರ ನನ್ನ ಜತೆಗಿದ್ದಳು. ಆದ್ದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಪತಿಯ ವಾದವನ್ನು ಪರಿಗಣಿಸಿದ್ದ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಪತಿಯು ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 8 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ತಾನು ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದು, ನಿರುದ್ಯೋಗಿಯಾಗಿದ್ದೇನೆ. ಆದ್ದರಿಂದ ಜೀವನ ನಿರ್ವಹಣೆಗೆ ಹಣದ ಅವಶ್ಯಕತೆ ಇದೆ ಎಂದು ಪತ್ನಿ ಅರ್ಜಿಯಲ್ಲಿ ತಿಳಿಸಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಪತಿ, ಪತ್ನಿಯು ಬಿ.ಕಾಂ. ವಿದ್ಯಾಭ್ಯಾಸದ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಆರ್ಥಿಕವಾಗಿ ಸದೃಡಳಿದ್ದಾಳೆ. ದುಬೈಗೆ ಬರುವಂತೆ ಕರೆದರೂ ಬಂದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
⚠️ ಸೆಕ್ಷನ್ 24ರ ಆಶಯವೇನು?
ಪತಿಯ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ದಂಪತಿಗಳು ಒಟ್ಟಾಗಿ ವಾಸಿಸಿದ ಅವಧಿ ಕಡಿಮೆ ಎಂದು ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಪ್ರಕಾರ, ವಿಚ್ಛೇದನ ಅಥವಾ ಇತರ ಕೌಟುಂಬಿಕ ವ್ಯಾಜ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ, ಸ್ವಂತ ಆದಾಯವಿಲ್ಲದ ಸಂಗಾತಿಗೆ (ಪತಿ ಅಥವಾ ಪತ್ನಿ) ಜೀವನ ನಿರ್ವಹಣೆ ಮತ್ತು ನ್ಯಾಯಾಲಯದ ವೆಚ್ಚಕ್ಕಾಗಿ ಹಣಕಾಸಿನ ನೆರವು ಪಡೆಯುವ ಹಕ್ಕಿದೆ. ಇಲ್ಲಿ ದಂಪತಿಗಳು ಎಷ್ಟು ಕಾಲ ಜೊತೆಯಲ್ಲಿದ್ದರು ಎನ್ನುವುದಕ್ಕಿಂತ, ಅರ್ಜಿದಾರರಿಗೆ ಆರ್ಥಿಕ ನೆರವಿನ ಅಗತ್ಯವಿದೆಯೇ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದೆ.