- ಅರ್ಹರಿಗೆ ಶೀಘ್ರ ಪಾವತಿಸಿ ಎಂದು ಹೈಕೋರ್ಟ್ ನಿರ್ದೇಶನ
- ಸರ್ಕಾರ ಮಾತು ತಪ್ಪಬಾರದು ಎಂದ ನ್ಯಾಯಾಲಯ
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಸೆರೆಗಾಗಿ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವಿಶೇಷ ಕಾರ್ಯಪಡೆಯ (ಎಸ್ಟಿಎಫ್) ಭಾಗವಾಗಿದ್ದ 72 ಮಂದಿ ಸಿಬ್ಬಂದಿಗೆ ಮೂರು ತಿಂಗಳೊಳಗೆ ಬಹುಮಾನದ ಹಣವನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ವೀರಪ್ಪನ್ ಹತ್ಯೆಯ ನಂತರ 2005ರ ಜು. 8ರಂದು ರಾಜ್ಯ ಸರ್ಕಾರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಬಹುಮಾನ ಘೋಷಿಸಿತ್ತು. ಆದರೆ, 2015ರ ಆ. 17ರಂದು ಅರಣ್ಯ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ ಕೆಲವು ಸಿಬ್ಬಂದಿಗೆ ಸೌಲಭ್ಯವನ್ನು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ನಿವೃತ್ತ ಗಾರ್ಡ್ ಎಸ್. ಶ್ರೀನಿವಾಸ ಮತ್ತಿತರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಇದೇ ರೀತಿಯ ಪ್ರಕರಣಗಳಲ್ಲಿ ಅರ್ಹ ಸಿಬ್ಬಂದಿಗೆ ಬಹುಮಾನದ ಹಣವನ್ನು ನೀಡುವಂತೆ ನ್ಯಾಯಾಲಯವು ಈಗಾಗಲೇ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹಾಗಿರುವಾಗ ಅರ್ಹರಿಗೆ ನ್ಯಾಯಾಲಯದ ಮೊರೆ ಹೋಗದಂತೆ ಮಾಡದೆ ಪರಿಹಾರ ನೀಡುವುದು ಸರ್ಕಾರದ ಸಾಂವಿಧಾನಿಕ ಹೊಣೆಯಾಗಿದೆ. ಆದ್ದರಿಂದ, ಅರ್ಜಿದಾರರಿಗೆ ಕೂಡ ಬಹುಮಾನದ ಮೊತ್ತ ನೀಡಬೇಕು ಎಂದು ಆದೇಶಿಸಿದೆ.
ಬಹುಮಾನ ನಿರಾಕರಿಸಿ ಸರ್ಕಾರ 2015ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಅರ್ಜಿದಾರರು ಕಾರ್ಯಾಚರಣೆಯ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಅವರ ಹೆಸರುಗಳು ಈಗಾಗಲೇ ಅರ್ಹ ಲಾನುಭವಿಗಳ ಪಟ್ಟಿಯಲ್ಲಿದೆ. ಇಂತಹ ಸಂದರ್ಭದಲ್ಲಿ ತಾಂತ್ರಿಕ ಕಾರಣಗಳನ್ನು ನೀಡಿ ಅರ್ಹರಿಗೆ ಬಹುಮಾನದ ಮೊತ್ತವನ್ನು ನಿರಾಕರಿಸುವುದು ಸರಿಯಲ್ಲ ಎಂದು ಹೇಳಿದೆ.
ನಿವೃತ್ತ ಅರಣ್ಯ ರಕ್ಷಕರು, ವಾಚರ್, ಡೆವರ್, ಉಪ ಅರಣ್ಯ ಸಂರಕ್ಷಕರು, ಸಹಾಯಕ ಅರಣ್ಯ ಸಂರಕ್ಷಕರು ಸೇರಿ 72 ಮಂದಿ ಅರ್ಜಿ ಸಲ್ಲಿಸಿದ್ದರು. #high court
⚠️ ಸರ್ಕಾರದ ನಿಲುವಿಗೆ ಟೀಕೆ
ಹಲವು ವರ್ಷಗಳ ಕಾಲ ವೀರಪ್ಪನ್ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರೂ ಬಹುಮಾನದ ಮೊತ್ತವನ್ನು ಕೆಲವೇ ಸಿಬ್ಬಂದಿಗೆ ಸೀಮಿತಗೊಳಿಸಿದ ಸರ್ಕಾರದ ನಿಲುವನ್ನು ವಿಚಾರಣೆ ವೇಳೆ ಹೈಕೋರ್ಟ್ ಟೀಕಿಸಿತ್ತು. ನೀಡಿರುವ ಮಾತನ್ನು ಉಳಿಸಿಕೊಳ್ಳುವುದು ಕರ್ತವ್ಯವಾಗಿದೆ. ಅದರಲ್ಲೂ ಸರ್ಕಾರದ ವಾಗ್ದಾನಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಎಚ್ಚರಿಸಿತ್ತು. ವೀರಪ್ಪನ್ ಸೆರೆ ಕಾರ್ಯಾಚರಣೆ ಒಂದು ದಿನದಲ್ಲಿ ಮುಗಿದಿಲ್ಲ. ಹಲವು ಸಿಬ್ಬಂದಿಗಳು ತನ್ನ ಜೀವವನ್ನು ಪಣಕ್ಕಿಟ್ಟು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಪ್ರಕರಣದ ವಿವರ:
ಪೊಲೀಸ್ ಮಹಾನಿರ್ದೇಶಕ ಶಿಫಾರಸ್ಸಿನಂತೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಲು ಸರ್ಕಾರ 2005ರಲ್ಲಿ ಒಪ್ಪಿಕೊಂಡಿತ್ತು. ಎಸ್ಟಿಎಫ್ನಲ್ಲಿ ಮೂರು ವರ್ಷಕ್ಕಿಂತ ಅಧಿಕ ಕಾಲ ಸೇವೆ ಸಲ್ಲಿಸಿದ್ದವರಿಗೆ 3 ಲಕ್ಷ ರೂಪಾಯಿ, ಎರಡರಿಂದ ಮೂರು ವರ್ಷದೊಳಗಿನ ಸೇವೆ 2 ಲಕ್ಷ ರೂ., ಎರಡು ವರ್ಷದೊಳಗಿನ ಸೇವೆಗ 1 ಲಕ್ಷ ರೂ. ಮತ್ತು ಒಂದು ವರ್ಷದ ಸೇವೆಗೆ 50 ಸಾವಿರ ರೂ. ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಅಲ್ಲದೆ, ನಿವೇಶನ ನೀಡುವ ಬಗ್ಗೆ ಕೂಡ ಶಿಫಾರಸು ಮಾಡಲಾಗಿತ್ತು. ಒಟ್ಟು 259 ಅರ್ಹ ಸಿಬ್ಬಂದಿಯನ್ನು ಗುರುತಿಸಲಾಗಿತ್ತು. ಆದರೆ, ಬಹುಮಾನದ ಮೊತ್ತ ಖಾಲಿಯಾಗಿರುವುದರಿಂದ ವೀರಪ್ಪನ್ ಹತ್ಯೆ ದಿನ ಸ್ಥಳದಲ್ಲಿದ್ದ 6 ಮಂದಿ ಎಸ್ಟಿಎಫ್ ಸಿಬ್ಬಂದಿಗೆ ಮಾತ್ರ ಬಹುಮಾನದ ಮೊತ್ತವನ್ನು ನೀಡುವುದಾಗಿ ಸರ್ಕಾರ ಹೇಳಿತ್ತು. ಈ ವಾದವನ್ನು ತಾರತಮ್ಯದಿಂದ ಕೂಡಿದ ನಿರ್ಧಾರ ಎಂದು ಹೇಳಿರುವ ಹೈಕೋರ್ಟ್ ಸಿಬ್ಬಂದಿಗಳ ವಿವಿಧ ಅರ್ಜಿಗಳನ್ನು ಈಗಾಗಲೇ ಪುರಸ್ಕರಿಸಿದೆ.