ಬೆಂಗಳೂರು: ನಗರದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ತನಕ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅವಳಿ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀಡುವ ಯಾವುದೇ ಗುತ್ತಿಗೆಯಾಗಲಿ ಅಥವಾ ಒಪ್ಪಂದವಾಗಲಿ, ಸದ್ಯ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಯೋಜನೆ ಪ್ರಶ್ನಿಸಿ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ಬಾಕಿ ಇರುವಾಗ ಯಾವುದೇ ಮೂರನೇ ವ್ಯಕ್ತಿಗಳ ಪರವಾಗಿ ಹಕ್ಕುಗಳನ್ನು ಸೃಷ್ಟಿಸಬಾರದು. ಯೋಜನೆಗೆ ಸಂಬಂಧಿಸಿದಂತೆ ಸದ್ಯ ನಡೆಯುತ್ತಿರುವ ನ್ಯಾಯಾಲಯದ ಪ್ರಕ್ರಿಯೆಗಳ ಮಾಹಿತಿಯನ್ನು ಗುತ್ತಿಗೆದಾರರಿಗೆ ತಲುಪಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ತಿಳಿಸಿತು. ಅರ್ಜಿದಾರರು ಸಲ್ಲಿಸಿರುವ ಸುಮಾರು 7 ಸಾವಿರ ಪುಟಗಳ ದಾಖಲೆಗಳನ್ನು ಪ್ರತಿವಾದಿಗಳಿಗೆ ಒದಗಿಸಲು ಸೂಚಿಸಿ ವಿಚಾರಣೆಯನ್ನು ಆ. 20ಕ್ಕೆ ಮುಂದೂಡಿತು.
ನಿಯಮ ಪಾಲನೆ ಅಗತ್ಯ:
ಬೆಂಗಳೂರಿನ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ಬಗೆಹರಿಸುವ ಅಗತ್ಯವಿದೆ. ಆದರೆ, ಸರ್ಕಾರದ ಸರಂಗ ರಸ್ತೆ ಯೋಜನೆಯನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಯಾವುದೇ ಯೋಜನೆ ಜಾರಿಗೊಳಿಸುವ ಮೊದಲು ನಿಯಮ ಪಾಲಿಸಲಾಗಿದೆಯೇ ಎಂಬುದನ್ನು ಮಾತ್ರ ನ್ಯಾಯಾಲಯ ನೋಡಲಿದೆ. ಅದನ್ನೇ ಈ ಪ್ರಕರಣದಲ್ಲೂ ಮಾಡಲಾಗುವುದು ಎಂದು ನ್ಯಾಯಪೀಠ ಇದೇ ವೇಳೆ ಅಭಿಪ್ರಾಯಪಟ್ಟಿದೆ.
ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿಯಲ್ಲಿ 2026ರ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ (ಬಿಎಂಎಲ್ಟಿಎ) ನಿಯಮಾವಳಿಗಳನ್ನು ಪ್ರಶ್ನಿಸಲಾಗಿದ್ದು, ಹೊಸ ನಿಯಮವು ಸುರಂಗ ರಸ್ತೆಯಂತಹ ಬೃಹತ್ ಯೋಜನೆಗಳನ್ನು ಪ್ರಾಧಿಕಾರದ ಪರಿಶೀಲನೆಯಿಂದ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನ್ಯಾಯಾಲಯವು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.