ಬೆಂಗಳೂರು: ಮೀಸಲಾತಿ ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿರುವ 2022ರ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಸೇವೆಗಳ ನೇಮಕಾತಿ ಮತ್ತು ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ ಆಧರಿಸಿ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.
ಇದರೊಂದಿಗೆ ಲೋಕಸೇವಾ ಆಯೋಗ ಆರಂಭಿಸಿರುವ 3,644 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಉಂಟಾಗಿದ್ದ ತಡೆ ನಿವಾರಣೆಯಾಗಿದ್ದು, ಮುಂದುವರಿಯಲು ಹಸಿರುನಿಶಾನೆ ಸಿಕ್ಕಿದೆ.
ಹೊಸ ಮೀಸಲಾತಿ ಆಧರಿಸಿದ ಎಲ್ಲ ನೇಮಕಾತಿ ಪ್ರಕ್ರಿಯೆಗಳಿಗೆ ನ.19ರಂದು ಹೈಕೋರ್ಟ್ ತಡೆ ನೀಡಿತ್ತು. ಈಗ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಆದರೆ, ಪ್ರಕರಣದಲ್ಲಿ ಸರ್ಕಾರಕ್ಕೆ ವ್ಯತಿರಿಕ್ತ ತೀರ್ಪು ಬಂದರೆ ಅದರ ಪರಿಣಾಮ ನೇಮಕಾತಿ ಮೇಲಾಗಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಈಗಾಗಲೇ ಆರಂಭಿಸಿರುವ ಪ್ರಕ್ರಿಯೆಗಳಿಗೆ ನೀಡಲಾಗಿದ್ದ ತಡೆ ತೆರವು ಮಾಡಲಾಗಿದೆ. ಆದರೆ, ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ಪರಿಶಿಷ್ಟ ಜಾತಿಗೆ ಶೇ.15ರಿಂದ 17 ಮತ್ತು ಪ.ಪಂಗಡಕ್ಕೆ ಶೇ.3ರಿಂದ ಶೇ.7ರವರೆಗೂ ಮೀಸಲಾತಿ ಹೆಚ್ಚಳ ಮಾಡಿ ಒಟ್ಟು ಮೀಸಲಾತಿಯನ್ನು 56ಕ್ಕೆ ಹೆಚ್ಚಿಸಿ 2023 ಜ.12ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ಮುಂದುವರಿಸಬಹುದು. ಆದರೆ, ಆಯ್ಕೆಯಾದವರಿಗೆ ನೀಡುವ ನೇಮಕಾತಿ ಅಥವಾ ಬಡ್ತಿ ಆದೇಶದಲ್ಲಿ ನೇಮಕಾತಿಯು ಪ್ರಸ್ತುತ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆರಂಭಿಸಿರುವ ಪ್ರಕ್ರಿಯೆಗೆ ಅನುಮತಿ:
ಗುರುವಾರ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ನೇಮಕಾತಿ ಸಂಬಂಧ ಹೊಸ ಅಧಿಸೂಚನೆ ಹೊರಡಿಸುವುದಿಲ್ಲ. ಆದರೆ, ಬಾಕಿಯಿರುವ 3,644 ಹುದ್ದೆಗಳಿಗೆ ರಾಜ್ಯ ಲೋಕಸೇವಾ ಆಯೋಗ ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಅಂತಿಮ ಹಂತದಲ್ಲಿದೆ. ಅರ್ಜಿದಾರರು ಸರ್ಕಾರದ ಅಧಿಸೂಚನೆಗಳನ್ನು ಪ್ರಶ್ನಿಸಿಲ್ಲ. ಆದ್ದರಿಂದ, ಆರಂಭಿಸಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಕೋರಿದರು.
ಕಾನೂನಾತ್ಮಕ ಪ್ರಶ್ನೆ ಪರಿಹಾರವಾಗಲಿ ಎಂದಿದ್ದ ಪೀಠ
ಕಾಯ್ದೆ ಅನುಷ್ಠಾನಕ್ಕೆ ತಡೆ ನೀಡಿದರೆ ಈಗಷ್ಟೇ ಆರಂಭವಾಗಿರುವ ನೇಮಕಾತಿ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗಲಿದೆ ಎಂದಿದ್ದ ಸರ್ಕಾರದ ವಾದಕ್ಕೆ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಪೀಠ, ಇನ್ನೂ ಆರು ತಿಂಗಳು ನೇಮಕಾತಿ ಮಾಡದಿದ್ದರೆ ಏನೂ ಆಗುವುದಿಲ್ಲ. ಅರ್ಜಿದಾರರು ಎತ್ತಿರುವ ಕಾನೂನಾತ್ಮಕ ಪ್ರಶ್ನೆಗಳು ಮೊದಲು ಪರಿಹಾರವಾಗಲಿ ಎಂದು ನೇಮಕಾತಿ ಸಂಬಂಧಿತ ಎಲ್ಲ ಕ್ರಮಗಳಿಗೆ ನ.19ರಂದು ತಡೆ ನೀಡಿತ್ತು.
ಸರ್ಕಾರ ಇತ್ಯರ್ಥಕ್ಕೆ ಸಿದ್ಧವಾಗಲಿ:
ಅಭ್ಯರ್ಥಿಯೊಬ್ಬರ ಪರವಾಗಿ ವಾದಿಸಿದ ವಕೀಲರು, ಹೊಸ ಕಾಯ್ದೆ ಅಡಿ ಈಗಾಗಲೇ ನೇಮಕ ಮಾಡಿರುವುದಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಬಹುದು. ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲಿ. ಆದರೆ, ಈಗ ನ್ಯಾಯಾಲಯದ ಅನುಮತಿ ಇಲ್ಲದೆ ನೇಮಕಾತಿ ಪಟ್ಟಿ ಪ್ರಕಟಿಸಬಾರದು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯಲ್ಲಿ ಸಮಸ್ಯೆಗಳಿವೆ ಎಂಬುದು ನಮ್ಮ ವಾದವಾಗಿದೆ ಎಂದರು.
ಅರ್ಜಿದಾರರ ಪರ ವಾದಿಸಿದ ವಕೀಲರು, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ನ್ಯಾಯಾಲಯ ಅವಕಾಶ ನೀಡಬಾರದು. ನಾವು ಅರ್ಜಿಗಳನ್ನು ಇತ್ಯರ್ಥ ಪಡಿಸುವುದಕ್ಕೆ ಸಿದ್ಧರಿದ್ದು, ಸರ್ಕಾರ ತನ್ನ ವಾದ ಸಲ್ಲಿಸಲಿ ಎಂದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜ.20ಕ್ಕೆ ಮುಂದೂಡಿದೆ.