High court 
ರಾಜ್ಯ

ಖಿನ್ನತೆಯಿಂದ ವಿಚಾರಣೆಗೆ ಗೈರಾದ ಆರೋಪಿಗೆ ಜಾಮೀನು| ಕೊನೇ ಅವಕಾಶ ಎಂದ High court

ಬೆಂಗಳೂರು: ತೀವ್ರ ಖಿನ್ನತೆಯ ಕಾರಣ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲ ಎಂಬ ವಾದವನ್ನು ಪರಿಗಣಿಸಿರುವ ಹೈಕೋರ್ಟ್​, ಯಶವಂತಪುರದ ಕಿಶೋರ್​ ಕುಮಾರ್​ ಎಂಬಾತನಿಗೆ ಜಾಮೀನು ಮಂಜೂರು ಮಾಡಿದೆ.
ದರೋಡೆಗೆ ಪಿತೂರಿ ನಡೆಸಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಕಿಶೋರ್​ ವಿರುದ್ಧ ವಿಚಾರಣಾ ನ್ಯಾಯಾಲಯವು ಜಾಮೀನುರಹಿತ ಬಂಧನ ವಾರಂಟ್​ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್​. ನಟರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಮನವಿಯನ್ನು ಪುರಸ್ಕರಿಸಿದ್ದು, ಆರೋಪಿಗೆ ಅಂತಿಮ ಅವಕಾಶ ನೀಡಿದೆ.
ಅರ್ಜಿದಾರನ ಪರ ವಾದಿಸಿದ್ದ ವಕೀಲರು, ಆರೋಪಿಯು ತೀವ್ರ ಖಿನ್ನತೆಗೆ ಒಳಗಾಗಿದ್ದ ಹಾಗೂ ತನಗೆ ತಾನೇ ಗಾಯ ಮಾಡಿಕೊಂಡಿದ್ದ ಕಾರಣ ನ್ಯಾಯಾಲಯಕ್ಕೆ ಹಾಜರಾಗಲು ಅಥವಾ ಜಾಮೀನುದಾರರನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅವಕಾಶ ನೀಡಿದರೆ ನ್ಯಾಯಾಲಯದ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಕೋರಿದ್ದರು. ಇದನ್ನು ಹೈಕೋರ್ಟ್​ ಪರಿಗಣಿಸಿದೆ. ಆದರೆ, ಇನ್ನೊಮ್ಮೆ ಷರತ್ತು ಉಲ್ಲಂಘಿಸಿದರೆ ಆತನ ಜಾಮೀನು ರದ್ದುಪಡಿಸುವ ಅಧಿಕಾರ ವಿಚಾರಣಾ ನ್ಯಾಯಾಲಯಕ್ಕೆ ಇದೆ ಎಂದು ಸ್ಪಷ್ಟಪಡಿಸಿದೆ. 

ಸರಣಿ ಗೈರು: 

ಯಶವಂತಪುರ ಪೊಲೀಸ್​ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅರ್ಜಿದಾರ 4ನೇ ಆರೋಪಿಯಾಗಿದ್ದ. ಫೆಬ್ರವರಿ 2019ರಲ್ಲಿ ಆತನಿಗೆ ನಿರೀಕ್ಷಣಾ ಜಾಮೀನು ದೊರೆತಿತ್ತಾದರೂ ಆತ ನ್ಯಾಯಾಲಯಕ್ಕೆ ಜಾಮೀನುದಾರರನ್ನು ಒದಗಿಸುವಲ್ಲಿ ವಿಫಲನಾಗಿದ್ದ. ಆ ಬಳಿಕ ಸತತವಾಗಿ ನ್ಯಾಯಾಲಯಕ್ಕೆ ಗೈರಾದ ಕಾರಣ ಆತನ ವಿರುದ್ಧ ಹಲವು ಬಾರಿ ಜಾಮೀನು ರಹಿತ ವಾರೆಂಟ್​ ಹೊರಡಿಸಲಾಗಿತ್ತು. 2023ರ ಸೆಪ್ಟೆಂಬರ್​ ಹಾಗೂ 2024ರ ನವೆಂಬರ್​ನಲ್ಲಿ ವಾರಂಟ್​ಗಳನ್ನು ರದ್ದುಪಡಿಸಿಕೊಂಡಿದ್ದರೂ ಆತ ಜಾಮೀನುದಾರರನ್ನು ಒದಗಿಸಿರಲಿಲ್ಲ.
2025ರ ಮೇ ತಿಂಗಳಲ್ಲಿ  ಆರೋಪಿ ಮತ್ತೆ ಗೈರಾದಾಗ ಆತನ ವಿರುದ್ಧ ಮತ್ತೆ ವಾರಂಟ್​ ಹೊರಡಿಸಲಾಗಿತ್ತು. ಆನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸತತವಾಗಿ ನ್ಯಾಯಾಲಯಕ್ಕೆ ವಂಚಿಸಿದ ಕಾರಣ ನೀಡಿ ಸೆಷನ್ಸ್​ ನ್ಯಾಯಾಲಯ ಆತನ ನಿಯಮಿತ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್​ ಮೆಟ್ಟಿಲೇರಿದ್ದ.