- ಇ.ಡಿ. ಅಧಿಕಾರಿಗಳಿಗೆ ಹೈಕೋರ್ಟ್ ಕ್ಲಾಸ್
- ನಿವೇಶನದ ತಾತ್ಕಾಲಿಕ ಜಪ್ತಿ ಆದೇಶ ರದ್ದು
ಬೆಂಗಳೂರು: ಯಾವುದೇ ಆರೋಪಪಟ್ಟಿ ಸಲ್ಲಿಕೆಯಾಗದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಅಧಿಕಾರ ಬಳಸಿ ಆಸ್ತಿ ಜಪ್ತಿ ಮಾಡುವಾಗ, ಆಸ್ತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳದಿದ್ದರೆ ಇಡೀ ಪ್ರಕ್ರಿಯೆಗೆ ಧಕ್ಕೆಯಾಗುತ್ತದೆ ಎಂಬುದನ್ನು ಲಿಖಿತ ದಾಖಲೆಗಳ ಮೂಲಕ ಜಾರಿ ನಿರ್ದೇಶನಾಲಯ (ಇಡಿ) ಸಾಬೀತುಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇಡೀ ಪ್ರಕ್ರಿಯೆಯು ಕಾನೂನುಬಾಹಿರವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸಂಬಂಧಿಸಿದ ನಿವೇಶನ ಹಂಚಿಕೆ ಪ್ರಕರಣವೊಂದರಲ್ಲಿ ಜಯಮ್ಮ ಎಂಬುವರ ಜಮೀನನ್ನು ತಾತ್ಕಾಲಿಕ ಜಪ್ತಿ ಮಾಡಿದ್ದ ಇ.ಡಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಎಸ್. ಸುನಿಲ್ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಅಧಿಕಾರಿಗಳು ಅಕ್ರಮ ಹಣಕಾಸು ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯ ವ್ಯಾಖ್ಯಾನವನ್ನು ಯಾಂತ್ರಿಕವಾಗಿ ನಕಲು ಮಾಡಿ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು ತಾಂತ್ರಿಕ ಭಾಷೆಯನ್ನು ಕೇವಲ ಕಾಪಿ-ಪೇಸ್ಟ್ ಮಾಡಿದರೆ ಸಾಕಾಗುವುದಿಲ್ಲ. ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ವಿವೇಚನೆ ಬಳಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಕಟು ನುಡಿದಿದೆ.
ಪ್ರಕರಣದ ಹಿನ್ನೆಲೆ:
ಮೈಸೂರಿನ ಜಯಮ್ಮ ಅವರ ಜಮೀನನ್ನು ಕಾನೂನುಬದ್ಧವಾಗಿ ಸ್ವಾಧಿನಪಡಿಸಿಕೊಳ್ಳದೆಯೇ ಅದರಲ್ಲಿ ಬಡಾವಣೆಯೊಂದನ್ನು ಮುಡಾ ನಿರ್ಮಿಸಿತ್ತು. ಇದಕ್ಕೆ ಪರಿಹಾರವಾಗಿ ಜಯಮ್ಮ ಅವರಿಗೆ ಪರ್ಯಾಯ ನಿವೇಶನಗಳನ್ನು ಕ್ರಯಪತ್ರದ ಮೂಲಕ ಮುಡಾ ನೀಡಿತ್ತು. ಆದರೆ, ಈ ಹಂಚಿಕೆಯಲ್ಲಿ ರಾಜಕೀಯ ಪ್ರಭಾವ ಮತ್ತು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ನಿರ್ದೇಶನದ ಪ್ರಕಾರ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದೇ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಜಯಮ್ಮ ಅವರು ಈ ಕ್ರಿಮಿನಲ್ ಪ್ರಕರಣದ ಆರೋಪಿಯಲ್ಲದಿದ್ದರೂ, ಅವರಿಗೆ ಹಂಚಿಕೆಯಾದ ನಿವೇಶನಗಳು "ಅಪರಾಧದ ಆದಾಯ' ಎಂದು ಪರಿಗಣಿಸಿ 2025ರ ಜೂನ್ನಲ್ಲಿ ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಇ.ಡಿಯ ಈ ಕ್ರಮವನ್ನು ಕಾನೂನುಬಾಹಿರ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
⚠️ ಖಾತಾ ಇಲ್ಲದ ಆಸ್ತಿ ಪರಭಾರೆ ಅಸಾಧ್ಯ
ಜಯಮ್ಮ ಅವರಿಗೆ ನೀಡಲಾಗಿರುವ ನಿವೇಶನಗಳ ಖಾತಾ ವರ್ಗಾವಣೆಯೂ ಇನ್ನೂ ಆಗಿಲ್ಲ. ಈ ಬಗ್ಗೆ ಹೈಕೋರ್ಟ್ನಲ್ಲಿ ಪ್ರತ್ಯೇಕ ಅರ್ಜಿ ಬಾಕಿ ಇದೆ. ಆಸ್ತಿಯ ಖಾತಾವೆ ಆಗದಿದ್ದಾಗ ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಆಸ್ತಿಯನ್ನು ತಕ್ಷಣ ಜಪ್ತಿ ಮಾಡದಿದ್ದರೆ ಅದನ್ನು ಮಾರಿ ಬಿಡುತ್ತಾರೆ ಎಂದು ಇ.ಡಿ ನೀಡಿರುವ ಕಾರಣ ವಾಸ್ತವಿಕ ಆಧಾರವನ್ನು ಹೊಂದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಇ.ಡಿ ವಾದಕ್ಕಿಲ್ಲ ಮಾನ್ಯತೆ:
ಇ.ಡಿ ಪರ ವಾದಿಸಿದ್ದ ವಕೀಲರು, ಪಿಎಂಎಲ್ಎ ಕಾಯ್ದೆಯಡಿ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ ಈ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಮನವಿ ಮಾಡಿದ್ದರು. ಆದರೆ, ಈ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಇ.ಡಿಯು ಇಡೀ ಪ್ರಕ್ರಿಯೆಯನ್ನೇ ಉಲ್ಲಂಘಿಸಿರುವುದರಿಂದ ಇದು ನೆರವಾಗಿ ಸಂವಿಧಾನದ 226ನೇ ವಿಧಿ ಪ್ರಕಾರ ಹೈಕೋರ್ಟ್ನ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಇ.ಡಿಗೆ ಸ್ವಾತಂತ್ರ್ಯ ನೀಡಲಾಗಿದೆ.