High court/ Vidhana Soudha
ಬೆಂಗಳೂರು: ಸ್ಥಳಿಯ ಸಂಸ್ಥೆಗಳ ಚುನಾವಣೆ ಮೀಸಲಾತಿ ಅಧಿಸೂಚನೆ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಅಂತಿಮ ಅವಕಾಶ ನೀಡಿದೆ.
ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಆಡಳಿತಾವಧಿ ಮುಕ್ತಾಯಗೊಳ್ಳಲಿರುವ 6 ಸಾವಿರ ಗ್ರಾಮ ಪಂಚಾಯಿತಿ ಮತ್ತು ಅವಧಿ ಮುಕ್ತಾಯಗೊಂಡಿರುವ 187 ನಗರ ಸ್ಥಳಿಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ಸಂಬಂಧ ಉತ್ತರಿಸಲು ಸರ್ಕಾರಕ್ಕೆ ಒಂದು ವಾರದ ಅವಕಾಶ ನೀಡಿದೆ.
ಚುನಾವಣಾ ಆಯೋಗದ ಪರ ವಾದಿಸಿದ ವಕೀಲರು, ಸಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಅದರಿಂದ ಪ್ರಯೋಜನವಾಗಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿ ನ.12ರಂದು ನೋಟಿಸ್ ಜಾರಿಯಾಗಿದೆ ಎಂದರು.
ಇದಕ್ಕೆ ಸರ್ಕಾರಿ ವಕೀಲರು ಉತ್ತರಿಸಿ, ಮೀಸಲಾತಿ ಅಧಿಸೂಚನೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಆದ್ದರಿಂದ ಅರ್ಜಿಯನ್ನು ಮುಂದೂಡುವಂತೆ ಕೋರಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರಕ್ಕೆ ಒಂದು ವಾರಗಳ ಅಂತಿಮ ಅವಕಾಶ ನೀಡಿ, ವಿಚಾರಣೆಯನ್ನು ಫೆ. 5ಕ್ಕೆ ಮುಂದೂಡಿತು.