- ತನಿಖಾ ಸಂಸ್ಥೆ ಆದೇಶ ಮೀರಿದ ನಿರ್ಬಂಧ ಬೇಡ
ಬೆಂಗಳೂರು: ತನಿಖಾ ಸಂಸ್ಥೆಗಳು ಎಷ್ಟು ಮೊತ್ತವನ್ನು ಖಾತೆಯಲ್ಲಿ ಫ್ರೀಜ್ ಮಾಡಬೇಕು ಎಂದು ಆದೇಶಿಸುತ್ತದೆಯೋ ಅಷ್ಟನ್ನು ಮಾತ್ರ ಮಾಡಬೇಕು. ಅದರ ಹೊರತಾಗಿ ಸ್ವಯಂಪ್ರೇರಿತವಾಗಿ ಖಾತೆಯನ್ನು ಸಂಪೂರ್ಣ ರ್ನಿಬಂಧಿಸುವ ಅಧಿಕಾರ ಬ್ಯಾಂಕ್ಗಳಿಗೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಮಧು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ. ತನಿಖಾ ಸಂಸ್ಥೆಗಳ ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಬ್ಯಾಂಕುಗಳ ಪಾತ್ರ ಸೀಮಿತವಾಗಿರುತ್ತದೆ. ನಿಯಮಗಳನ್ನು ಪಾಲಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರು ಖಾಸಗಿ ಬ್ಯಾಂಕ್ ಒಂದರಲ್ಲಿ ಖಾತೆ ಹೊಂದಿದ್ದರು. ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಅವರ ಖಾತೆಯಲ್ಲಿನ ಹಣವನ್ನು ಫ್ರೀಜ್ ಮಾಡುವಂತೆ ಗುಜರಾತ್ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಂದ ಎರಡು ಪ್ರತ್ಯೇಕ ನೋಟಿಸ್ಗಳು ಬ್ಯಾಂಕ್ಗೆ ಬಂದಿತ್ತು. ಪೊಲೀಸರು ಫ್ರೀಜ್ ಮಾಡಲು ಕೋರಿದ್ದ ಒಟ್ಟು ಮೊತ್ತ 25 ಸಾವಿರ ರೂಪಾಯಿ ಆಗಿದ್ದರೂ, ಭವಿಷ್ಯದಲ್ಲಿ ಹೆಚ್ಚಿನ ಆದೇಶಗಳು ಬರಬಹುದು ಎಂಬ ಕಾರಣಕ್ಕೆ ಬ್ಯಾಂಕ್ ಸ್ವಯಂಪ್ರೇರಿತವಾಗಿ ಇಡೀ ಖಾತೆಯ ವ್ಯವಹಾರವನ್ನು ನಿರ್ಬಂಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಬ್ಯಾಂಕ್ನ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಬ್ಯಾಂಕ್ ಖಾತೆ ಫ್ರೀಜ್ ಮಾಡುವುದರಿಂದ ಖಾತೆದಾರನ ಮೇಲೆ ಗಂಭೀರ ನಾಗರಿಕ ಮತ್ತು ಆರ್ಥಿಕ ಪರಿಣಾಮಗಳು ಉಂಟಾಗುತ್ತವೆ. ಬ್ಯಾಂಕ್ ಮತ್ತು ಗ್ರಾಹಕನ ನಡುವಿನ ಸಂಬಂಧವು ಒಪ್ಪಂದ ಮತ್ತು ವಿಶ್ವಾಸದ ಮೇಲೆ ಆಧಾರಿತವಾಗಿದೆ. ಖಾತೆಯಲ್ಲಿರುವ ಹಣ ಗ್ರಾಹಕನಿಗೆ ಸೇರಿದ್ದಾಗಿದ್ದು, ಬ್ಯಾಂಕುಗಳು ಕೇವಲ ತನಿಖಾ ಸಂಸ್ಥೆಗಳು ನೀಡಿದ ನಿರ್ದಿಷ್ಟ ಮಿತಿಗೆ ಮಾತ್ರ ಬದ್ಧವಾಗಿರಬೇಕು ಸ್ಪಷ್ಟಪಡಿಸಿದೆ.
ಬ್ಯಾಂಕ್ಗಳಿಗೆ ಸಾರ್ವತ್ರಿಕ ನಿರ್ದೇಶನ:
1. ತನಿಖಾ ಸಂಸ್ಥೆಗಳು ರ್ನಿದಿಷ್ಟ ಮೊತ್ತವನ್ನು ಉಲ್ಲೇಖಿಸಿದಾಗ, ಬ್ಯಾಂಕುಗಳು ಕೇವಲ ಅಷ್ಟೇ ಮೊತ್ತದ ಮೇಲೆ ರ್ನಿಬಂಧ ವಿಧಿಸಿ, ಇನ್ನುಳಿದ ಹಣವನ್ನು ಬಳಸಲು ಗ್ರಾಹಕರಿಗೆ ಮುಕ್ತ ಅವಕಾಶ ನೀಡಬೇಕು.
2. ಬ್ಯಾಂಕ್ ಯಾವುದೇ ತನಿಖಾ ಸಂಸ್ಥೆ ಅಲ್ಲ. ತನಿಖಾ ಸಂಸ್ಥೆಗಳು ಇಡೀ ಖಾತೆಯನ್ನು ಫ್ರೀಜ್ ಮಾಡಲು ಸ್ಪಷ್ಟವಾಗಿ ತಿಳಿಸದ ಹೊರತು ಅಥವಾ ಯಾವುದೇ ಶಾಸನಬದ್ಧ ಆದೇಶವಿಲ್ಲದ ಹೊರತು ಖಾತೆಯನ್ನು ಸಂಪೂರ್ಣ ಫ್ರೀಜ್ ಮಾಡುವಂತಿಲ್ಲ.