High court 
ರಾಜ್ಯ

ಅತ್ಯಾಚಾರವೆಸಗಿ ಬಾಲಕಿ ಕೊಂದವರಿಗೆ ಗಲ್ಲು| High court

ಪ್ರಮುಖ ಮುಖ್ಯಾಂಶಗಳು

  • ಪೋಕ್ಸೋ ವಿಶೇಷ ಕೋರ್ಟ್​ನ ಆದೇಶ ಎತ್ತಿಹಿಡಿದ ಹೈಕೋರ್ಟ್​
  • ಸಮಾಜದ ಸಾಕ್ಷಿ ಪ್ರಜ್ಞೆಯನ್ನೇ ನಡುಗಿಸಿದ ಪ್ರಕರಣವೆಂದ ನ್ಯಾಯಪೀಠ
ಬೆಂಗಳೂರು: ಮಂಗಳೂರಿನ ವಾಮಂಜೂರಿನಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್​ ಎತ್ತಿಹಿಡಿದಿದೆ. ಇದು ಸಮಾಜದ ಸಾಕ್ಷಿ ಪ್ರಜ್ಞೆಯನ್ನೇ ನಡುಗಿಸಿದ ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದ್ದು, ಅಪರಾಧಿಗಳು ಯಾವುದೇ ರೀತಿಯ ಅನುಕಂಪಕ್ಕೆ ಅರ್ಹರಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಅಪರಾಧಿಗಳಾದ ಜೈಬನ್​ ಆದಿವಾಸಿ, ಮುಕೇಶ್​ ಸಿಂಗ್​ ಮತ್ತು ಮನೀಶ್​ ರ್ತಿಕಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಎಚ್​.ಪಿ. ಸಂದೇಶ್​ ಮತ್ತು ಟಿ. ವೆಂಕಟೇಶ್​ ನಾಯಕ್​ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಮನವಿಯಂತೆ ಶಿಕ್ಷೆಯನ್ನು ಖಚಿತಪಡಿಸಿ ತೀರ್ಪು ನೀಡಿದೆ.
ಅಪರಾಧಿಗಳು ಬಾಲಕಿಯ ಮೇಲೆ ಅತಿ ಗಂಭೀರ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆಯ ಜೀವವನ್ನೇ ತೆಗೆದಿದ್ದಾರೆ. ಇದು ಕೇವಲ ನ್ಯಾಯಾಂಗದ ಸಾಕ್ಷಿಪ್ರಜ್ಞೆಯನ್ನು ಮಾತ್ರವಲ್ಲದೆ, ಇಡೀ ಸಮಾಜದ ಸಾಕ್ಷಿಪ್ರಜ್ಞೆಯನ್ನೇ ನಡುಗಿಸಿದೆ. ಇಂತಹ ಘೋರ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ನೀಡದೆ ಹೋದರೆ ಅದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ಪ್ರಕರಣವೇನು?

2021ರ ನ.21ರಂದು ವಾಮಂಜೂರಿನ ಟೈಲ್ಸ್​ ಫ್ಯಾಕ್ಟರಿಯ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಸಿಹಿತಿಂಡಿಯ ಆಮಿಷವೊಡ್ಡಿದ ಅಪರಾಧಿಗಳು ಆಕೆಯನ್ನು ಅಲ್ಲಿನ ಕೋಣೆಯೊಂದಕ್ಕೆ ಕರೆದೊಯ್ದಿದ್ದರು. ಬಾಲಕಿಯ ಪಾಲಕರು ಮತ್ತು ಅಪರಾಧಿಗಳು ಅದೇ ಫ್ಯಾಕ್ಟರಿಯಲ್ಲಿ ಕೆಲಸಗಾರರಾಗಿದ್ದು, ಆಕೆಯ ಮೇಲೆ ಮೂವರೂ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪ್ರಕರಣದ 4ನೇ ಆರೋಪಿ ಸೀತಾ ರಂತು ಲೋಹರ್​ ಸಿರಂಗೆದ ಎಂಬಾತ ಕೋಣೆಯ ಹೊರಗೆ ನಿಂತಿದ್ದು, ಯಾರಾದರೂ ಬರುತ್ತಾರೆಯೇ ಎಂದು ನೋಡಲು ಕಾವಲು ಕಾಯುತ್ತಿದ್ದ. ಪೈಶಾಚಿಕವಾಗಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾರಣ ಬಾಲಕಿ ನೋವಿನಿಂದ ಕಿರುಚಿದ್ದಾಳೆ. ಆಗ ಅಪರಾಧಿಗಳು ಆಕೆಯ ಬಾಯಿ ಮುಚ್ಚಿ ಕತ್ತು ಹಿಸುಕಿ ಹತ್ಯೆ ಮಾಡಿದ್ದರು. ನಂತರ ಮೃತದೇಹವನ್ನು ಹತ್ತಿರದ ಚರಂಡಿ ಪೈಪ್​ನಲ್ಲಿ ಮುಚ್ಚಿಟ್ಟಿದ್ದರು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮೀಣ ಪೊಲೀಸ್​ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿ ನಾಲ್ವರನ್ನು ಬಂಧಿಸಿದ್ದರು.

ವೈಜ್ಞಾನಿಕ ಸಾಕ್ಷಿಗಳ ಬಲ

ಈ ಪ್ರಕರಣದಲ್ಲಿ ಪೊಲೀಸರು ಸಂಗ್ರಹಿಸಿದ್ದ ಡಿಎನ್​ಎ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು ಅಪರಾಧಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳಾಗಿ ಕೆಲಸ ಮಾಡಿದ್ದವು. ಅತ್ಯಾಚಾರ ನಡೆದ ಕೋಣೆಯಲ್ಲಿ ಸಿಸಿ ಕ್ಯಾಮರ ಇಲ್ಲದಿದ್ದರೂ, ಹೊರಗಿದ್ದ ಸಿಸಿ ಕ್ಯಾಮರದಲ್ಲಿ ಬಾಲಕಿ ಕೊನೇ ಬಾರಿ ಅಪರಾಧಿಗಳೊಂದಿಗೆ ಇರುವುದು ಕಂಡುಬಂದಿತ್ತು. ಅದರಲ್ಲಿ ಅಪರಾಧಿಗಳು ಬಾಲಕಿಯನ್ನು ಕರೆದೊಯ್ಯುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಮರಣೋತ್ತರ ಪರೀಕ್ಷೆ ವರದಿಯು ಬಾಲಕಿಯ ಮೇಲೆ ನಡೆದ ದೌರ್ಜನ್ಯದ ಭೀಕರತೆಯನ್ನು ಸಾಬೀತುಪಡಿಸಿತ್ತು. 

ತಲೆಮರೆಸಿಕೊಂಡಿರುವ 4ನೇ ಆರೋಪಿ 

ಲಭ್ಯ ಮತ್ತು ಸಾಂಧರ್ಬಿಕ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ 2024ರ ನ.7ರಂದು ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿತ್ತು. ಇದೀಗ ಹೈಕೋರ್ಟ್​ ಅದನ್ನು ಖಚಿತಪಡಿಸಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 4ನೇ ಆರೋಪಿ ಸೀತಾ ರಂತು ಲೋಹರ್​ ಸಿರಂಗೆದ ತಲೆಮರೆಸಿಕೊಂಡಿದ್ದಾನೆ.