High court 
ರಾಜ್ಯ

ಆರ್​ಟಿಐ ದುರ್ಬಳಕೆ ಬಗ್ಗೆ ಹೈಕೋರ್ಟ್​ ಗರಂ| High court

ಪ್ರಮುಖ ಮುಖ್ಯಾಂಶಗಳು

  • ಅನಗತ್ಯ ಮನವಿಗಳಿಂದ ನೈಜ ಅರ್ಜಿದಾರರಿಗೆ ಸಮಸ್ಯೆ
  • ಕಪ್ಪುಪಟ್ಟಿ ಸೇರಿರುವವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: 

ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್​ಟಿಐ) ದುರ್ಬಳಕೆ ಮಾಡಿಕೊಂಡು ಆಡಳಿತ ವ್ಯವಸ್ಥೆಗೆ ತೊಡಕುಂಟುಮಾಡುವ ಪ್ರಕ್ರಿಯೆಯನ್ನು ಸಹಿಸಲಾಗದು. ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಮಸ್ಯೆ ಉಂಟುಮಾಡುವುದು ಮೇಲ್ನೋಟಕ್ಕೆ ಕಾಯ್ದೆಯ ದುರ್ಬಳಕೆಯಂತೆ ಕಾಣುತ್ತಿದೆ ಎಂದು ಹೈಕೊರ್ಟ್​  ಅಸಮಾಧಾನ ವ್ಯಕ್ತಪಡಿಸಿದೆ.

ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಿರುವ ರಾಜ್ಯ ಮಾಹಿತಿ ಆಯೋಗದ ಕ್ರಮವನ್ನು ಪ್ರಶ್ನಿಸಿ ಜಿ.ಆರ್​. ಸುಧೀಂದ್ರ ಸೇರಿ 9 ಮಂದಿ ಆರ್​ಟಿಐ ಕಾರ್ಯಕರ್ತರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.

ಅನಗತ್ಯವಾಗಿ ಸಾವಿರಾರು ಅರ್ಜಿ ಸಲ್ಲಿಸುವುದರಿಂದ ವ್ಯವಸ್ಥೆಯ ಮೇಲೆ ಹೊರೆ ಬೀಳುತ್ತದೆ. ಇದು ನಿಜವಾದ ಸಮಸ್ಯೆಗಳ ಕುರಿತಾಗಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮೇಲೆ ಪರಿಣಾಮ ಬೀರುತ್ತದೆ. ಒಬ್ಬೊಬ್ಬರೇ ಹತ್ತು ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಸಮಸ್ಯೆಗಳು ಯಾವುದೇ ವ್ಯಕ್ತಿಗೆ ಇರಲು ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆ ಮತ್ತು ನೈಜ ಅರ್ಜಿದಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಅಗತ್ಯವಾಗಿದೆ ಎಂದು ಹೇಳಿದೆ. 

ಅಫಿಡವಿತ್​ ಸಲ್ಲಿಸಲು ಸೂಚನೆ:

ಅರ್ಜಿದಾರರು ಸೆ.21ರೊಳಗೆ ವಿವರವಾದ ಅಫಿಡವಿತ್​ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದರಲ್ಲಿ ದಾಖಲಿಸಿದ ಒಟ್ಟು ಅರ್ಜಿಗಳ ಸಂಖ್ಯೆ, ದಿನಾಂಕ, ಮಾಹಿತಿ ಕೋರಿದ ಪ್ರಾಧಿಕಾರ, ಅರ್ಜಿಯಲ್ಲಿ ಕೇಳಲಾದ ರ್ನಿದಿಷ್ಟ ಮಾಹಿತಿ, ಮಾಹಿತಿ ಕೋರಲು ಕಾರಣ ಮತ್ತು ಆ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಬಳಸಲು ಯೋಜಿಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟ ವಿವರಣೆ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ℹ️

ಅರ್ಜಿಗಳ ಸಂಖ್ಯೆಗೆ ಆಶ್ಚರ್ಯ 

ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ಬಗ್ಗೆ ಹೈಕೋರ್ಟ್​ ವಿಚಾರಣೆ ವೇಳೆ ಆಶ್ಚರ್ಯ ವ್ಯಕ್ತಪಡಿಸಿದೆ. ಎಂ. ಜಗದೀಶ್​ ಎಂಬುವವರು 1,294 ಅರ್ಜಿಗಳು, ಎಂ, ದವಾಲ್ಸಾಬ್​ ಎಂಬುವವರು 14,774 ಅರ್ಜಿಗಳು, ಹಾಗೂ ಜಿ.ಆರ್​. ಸುಧೀಂದ್ರ ಎಂಬುವವರು 6,482 ಮೇಲ್ಮನವಿಗಳನ್ನು ದಾಖಲಿಸಿರುವುದು ತಿಳಿದುಬಂದಿದೆ. ತನಿಖಾ ವರದಿಗಾಗಿ ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಇಷ್ಟು ಬೃಹತ್​ ಸಂಖ್ಯೆಯಲ್ಲಿ ಮಾಹಿತಿ ಕೋರಿ ಲೇಖನಗಳನ್ನು ಪ್ರಕಟಿಸಲು ಸಾಧ್ಯವೇ ಎಂದು ತರಾಟೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆ ಸೆ. 28ಕ್ಕೆ ನಿಗದಿಯಾಗಿದೆ.