- ಬೆಂಗಳೂರಿನಲ್ಲಿ ಶೆಡ್ನಲ್ಲಿ 2.98 ಕೋಟಿ ರೂ. ವಶ ಪ್ರಕರಣ
ಬೆಂಗಳೂರು: ಕಾನೂನು ಪ್ರಕ್ರಿಯೆ ಪಾಲಿಸದೆ ಶೆಡ್ ಆವರಣಕ್ಕೆ ಪ್ರವೇಶಿಸಿ ಕೋಟ್ಯಂತರ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿರುವ ಹೈಕೋರ್ಟ್, ಪೊಲೀಸರಾದ ಮಾತ್ರಕ್ಕೆ ಕಾನೂನು ಮೀರಿ ವರ್ತಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.
ನಗರದ ಕುರುಬರಹಳ್ಳಿ ಕೈಗಾರಿಕಾ ಪ್ರದೇಶದ ಶೆಡ್ವೊಂದರಲ್ಲಿ ಇಟ್ಟಿದ್ದ 2.98 ಕೋಟಿ ರೂ. ಹಣ ವಶಪಡಿಸಿಕೊಂಡು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಕೋರಿ ಟಿ.ಎಂ. ನಾಗರಾಜ್ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದಲ್ಲಿ ಪೊಲೀಸರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರರು ಬ್ಯಾಂಕಿನಲ್ಲಿರುವ ಸಾಲ ಮರು ಪಾವತಿಸಲು ಕಾನೂನುಬದ್ಧವಾಗಿಯೇ ಹಣ ತಂದಿಟ್ಟುಕೊಂಡಿದ್ದರು. ಈ ಬಗ್ಗೆ ಅವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನಿಯಮ ಮೀರಿ ವರ್ತಿಸಿದ್ದಾರೆ. ಜೂ.2ರಂದು ಹಣ ವಶಪಡಿಸಿಕೊಂಡು 12ನೇ ತಾರೀಕಿನಂದು ಮ್ಯಾಜಿಸ್ಟ್ರೆಟ್ ಮುಂದೆ ವರದಿ ಸಲ್ಲಿಸಲಾಗಿದೆ. 10 ದಿನಗಳ ಕಾಲ ಹಣ ಎಲ್ಲಿತ್ತು. ಪೊಲೀಸರು ಬಡ್ಡಿಗೆ ಕೊಟ್ಟಿದ್ದರೆ ಎಂದು ಪ್ರಶ್ನಿಸಿ, ಇದಕ್ಕೆಲ್ಲ ತನಿಖಾಧಿಕಾರಿ ಉತ್ತರಿಸಬೇಕು ಎಂದು ನ್ಯಾಯಪೀಠ ಹೇಳಿತು. ತನಿಖಾಧಿಕಾರಿ ವಿರುದ್ಧ ಇಲಾಖಾ ತನಿಖೆಯ ಅಗತ್ಯವಿದೆ ಎಂದು ಈ ವೇಳೆ ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಮುಂದಿನ ವಿಚಾರಣೆಯನ್ನು ಜು. 27ಕ್ಕೆ ನಿಗದಿಯಾಗಿದೆ.
ಹಣ ಬ್ಯಾಂಕ್ಗೆ ಜಮೆ:
ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಗಣಿಸಿರುವ ನ್ಯಾಯಪೀಠ, ಈ ಪ್ರಕರಣದ ತನಿಖಾ ಪ್ರಕ್ರಿಯೆಗಳಿಗೆ ಜು. 9ರಂದು ತಡೆಯಾಜ್ಞೆ ನೀಡಿದೆ. ಅರ್ಜಿದಾರರು ಬ್ಯಾಂಕ್ಗೆ ಹಣ ಜಮೆ ಮಾಡಿಲ್ಲವಾದರೆ, ಆಸ್ತಿ ಹರಾಜಾಗಲಿದೆ ಎಂಬ ಕಾರಣದಿಂದ ಪೊಲೀಸರು ವಶಪಡಿಸಿಕೊಂಡಿರುವ 2.98 ಕೋಟಿ ರೂ. ಹಣವನ್ನು ಅರ್ಜಿದಾರರ ಸಾಲದ ಖಾತೆಗೆ ನೇರವಾಗಿ ಜಮೆ ಮಾಡುವಂತೆ ಸೂಚಿಸಲಾಗಿತ್ತು. ಅದರ ಮೇಲ್ವಿಚಾರಣೆ ವಹಿಸುವಂತೆ ತನಿಖಾಧಿಕಾರಿಗೆ ಸೂಚಿಸಲಾಗಿತ್ತು. ಅದನ್ನು ಪಾಲಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಠಾಣೆಯ ಪಿಎಸ್ಐ ರಾಕೇಶ್ ಮತ್ತು ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಕುರುಬರಹಳ್ಳಿ 11ನೇ ಕ್ರಾಸ್ನಲ್ಲಿರುವ ಶೇಷಾದ್ರಿ ಇಂಡಸ್ಟ್ರೀಸ್ ಹೆಸರಿನ ಶೆಡ್ನಲ್ಲಿ ನಗದು ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಜೂ. 2ರಂದು ಎನ್ಸಿಆರ್ ದಾಖಲಿಸಿ ಮ್ಯಾಜಿಸ್ಟ್ರೆಟ್ ಅನುಮತಿ ಪಡೆದು ಶೆಡ್ಗೆ ತೆರಳಿ ತಪಾಸಣೆ ನಡೆಸಿದಾಗ ನಾಲ್ಕು ದೊಡ್ಡ ಬ್ಯಾಗ್ಗಳಲ್ಲಿ ತುಂಬಿಟ್ಟಿದ್ದ ನೋಟುಗಳು ಪತ್ತೆಯಾಗಿದ್ದವು. ಇದನ್ನು ವಶಪಡಿಸಿಕೊಳ್ಳಲಾಗಿತ್ತು. ಹಣವನ್ನು ಜೂ. 2ರಂದೇ ವಶಪಡಿಸಿಕೊಂಡಿದ್ದರೂ ಆ ಬಗ್ಗೆ ಮ್ಯಾಜಿಸ್ಟ್ರೆಟ್ಗೆ ವರದಿ ಸಲ್ಲಿಸುವಾಗ ಪೊಲೀಸರು ವಿಳಂಬ ಮಾಡಿದ್ದಾರೆ. ಈ ವಿಳಂಬವನ್ನು ಹೈಕೋರ್ಟ್ ಪ್ರಶ್ನಿಸಿದೆ.
ದಾಖಲೆ ಸಲ್ಲಿಸಲು ಅವಕಾಶ ನೀಡಿಲ್ಲ:
ಅರ್ಜಿದಾರರು ಹಣವನ್ನು ಕಾನೂನುಬದ್ಧವಾಗಿಯೇ ಪಡೆದುಕೊಂಡು ಬಂದು ಇಟ್ಟಿದ್ದಾರೆ. ಬ್ಯಾಂಕ್ಗೆ ರಜಾ ಇದ್ದ ಕಾರಣ ಅದನ್ನು ತನ್ನ ಸ್ನೇಹಿತರ ಫ್ಯಾಕ್ಟರಿ ಆವರಣದಲ್ಲಿ ಇಟ್ಟಿದ್ದರು. ದಾಖಲೆಗಳು ಇರುವಾಗ ಅದು ಅಕ್ರಮ ಹಣ ಆಗುವುದು ಹೇಗೆ? ಪೊಲೀಸರು ಹೀಗೆಲ್ಲ ತಮ್ಮ ವ್ಯಾಪ್ತಿ ಮೀರಿ ಅದನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂದು ವಿಚಾರಣೆ ವೇಳೆ ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ಪೊಲೀಸರಿಗೆ ಅವರು ದಾಖಲೆಗಳನ್ನು ನೀಡಿರಲಿಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ಅರ್ಜಿದಾರರ ವಕೀಲರು, ದಾಖಲೆಗಳನ್ನು ಸಲ್ಲಿಸಲು ಪೊಲೀಸರು ಅವಕಾಶ ನೀಡಿಲ್ಲ ಎಂದು ತಿಳಿಸಿದರು.