ಉಡುಪಿ ಶ್ರೀಕೃಷ್ಣ 
ರಾಜ್ಯ

ಉಡುಪಿ ಶ್ರೀಕೃಷ್ಣ ಮಠದ ಅರ್ಜಿ ವಜಾ| High court

ಪ್ರಮುಖ ಮುಖ್ಯಾಂಶಗಳು

  • ಸಾವಿರ ಕೆಜಿ ಶ್ರೀಗಂಧ ಕೋರಿದ್ದ ಅರ್ಜಿ ತಿರಸ್ಕೃತ
  • ಸರ್ಕಾರದ ನೀತಿಯಲ್ಲಿ ಹಸ್ತಕ್ಷೇಪವಿಲ್ಲ ಎಂದ ನ್ಯಾಯಾಲಯ
ಬೆಂಗಳೂರು: ಧಾರ್ಮಿಕ ವಿಧಿವಿಧಾನಗಳಿಗೆ ಅಗತ್ಯವಾದ 1,087 ಕೆಜಿ ಶ್ರೀಗಂಧವನ್ನು ಪೂರೈಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಉಡುಪಿಯ ಶ್ರೀಕೃಷ್ಣ ಮಠ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್​ ತಿರಸ್ಕರಿಸಿದ್ದು, ಸೀಮಿತ ಪ್ರಮಾಣದ ಶ್ರೀಗಂಧ ಪೂರೈಕೆಗೆ ಅವಕಾಶ ನೀಡಿದ್ದ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ.
ಸರ್ಕಾರದ ನಿರ್ಧಾರ ಸಮರ್ಥಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಶ್ರೀಕೃಷ್ಣ ಮಠ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ. ಸಾರ್ವಜನಿಕ ಆಸ್ತಿಯಾದ ಶ್ರೀಗಂಧದ ಮರಗಳನ್ನು ಸಂರಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಲಭ್ಯತೆಯ ಆಧಾರದ ಮೇಲೆ ರೂಪಿಸಲಾದ ನೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
1896ರಿಂದಲೂ ಮಠಕ್ಕೆ ಮೈಸೂರು ರಾಜ್ಯದಿಂದ ವಾರ್ಷಿಕವಾಗಿ 1,087 ಕೆಜಿ ಶ್ರೀಗಂಧದ ಮರಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಮಠದ ಪೂಜಾ ವಿಧಿವಿಧಾನಗಳಲ್ಲಿ ಗಂಧದ ಲೇಪನ ಅತ್ಯಗತ್ಯವಾಗಿದ್ದು, ಇದಕ್ಕಾಗಿ ಹಳೆಯ ಪದ್ಧತಿಯಂತೆ ಪೂರೈಕೆ ಮುಂದುವರಿಸಬೇಕು ಎಂದು ಕೋರಲಾಗಿತ್ತು. 2010ರಲ್ಲಿ ಮಠವನ್ನು ಮುಜರಾಯಿ ದೇವಾಸ್ಥಾನಗಳ ಪಟ್ಟಿಯಿಂದ ಹೊರಗಿಟ್ಟ ನಂತರ ಶ್ರೀಗಂಧದ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಲಾಗಿದೆ.
ಈ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ಮಠವು ವಾರ್ಷಿಕ 10 ಕೆಜಿ ಶ್ರೀಗಂಧಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಧಾರ್ಮಿಕ ಸಂಸ್ಥೆಗಳು ತಮ್ಮ ಪೂಜಾ ಕಾರ್ಯಗಳಿಗಾಗಿ ತಾವೇ ಸ್ವಂತವಾಗಿ ಶ್ರೀಗಂಧದ ಮರಗಳನ್ನು ಬೆಳೆಸಲು ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಏಕಸದಸ್ಯ ನ್ಯಾಯಪೀಠವು ಪರಿಸರ ಮತ್ತು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತ್ತು. 
ಸರ್ಕಾರದ ನೀತಿ ಏನಿದೆ?:
ರಾಜ್ಯ ಸರ್ಕಾರವು 2017ರಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ದೇವಸ್ಥಾನಗಳಿಗೆ ಪೂರೈಸುವ ಶ್ರೀಗಂಧದ ಪ್ರಮಾಣದ ಬಗ್ಗೆ ಸ್ಪಷ್ಟಪಡಿಸಲಾಗಿದೆ. 'ಎ' ವರ್ಗದ ದೇವಾಲಯಗಳಿಗೆ 20 ಕೆ.ಜಿ ಮತ್ತು 'ಬಿ' ವರ್ಗದ ದೇವಾಲಯಗಳಿಗೆ 10 ಕೆಜಿ ಶ್ರೀಗಂಧ ಪೂರೈಕೆಗೆ ಮಾತ್ರ ಅವಕಾಶ ನೀಡಲಾಗಿದೆ.