- ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ನಿಂದ ಅರ್ಜಿ
ಬೆಂಗಳೂರು: ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಾಸದಿಂದ ಉದ್ಯಮಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ ಎಂದು ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪ್ರತಿವಾದಿ ತೈಲಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮಂಗಳವಾರ ವಿಚಾರಣೆ ನಡೆಸಿತು. ವಾಣಿಜ್ಯ ಎಲ್ಪಿಜಿ ದಾಸ್ತಾನು ಲಭ್ಯತೆ, ಪೂರೈಕೆ ವ್ಯವಸ್ಥೆ ಮತ್ತು ಅನುಸರಿಸುತ್ತಿರುವ ವಿತರಣಾ ಕಾರ್ಯವಿಧಾನ ಮತ್ತು ಪೂರೈಕೆಯಲ್ಲಿನ ವ್ಯತ್ಯಯವನ್ನು ಸರಿಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಮಾಹಿತಿ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಲಾಗಿದ್ದು, ವಿಚಾರಣೆ ಮಾ. 23ಕ್ಕೆ ನಿಗದಿಯಾಗಿದೆ.
ಅರ್ಜಿಯಲ್ಲೇನಿದೆ?
ಅಂತಾರಾಷ್ಟ್ರೀಯ ಉದ್ವಿಗ್ನತೆ ಎಲ್ಪಿಜಿ ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ತೈಲ ಕಂಪನಿಗಳು ಮತ್ತು ಏಜೆನ್ಸಿಗಳು ತಿಳಿಸಿವೆ. ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ನಿಯಂತ್ರಣಕ್ಕೆ ಆದೇಶಿಸಿದೆ. ಅದರ ಬೆನ್ನಲೇ ರಾಜ್ಯ ಸರ್ಕಾರವು ದಿನಕ್ಕೆ ಕೇವಲ 1 ಸಾವಿರ ವಾಣಿಜ್ಯ ಸಿಲಿಂಡರ್ಗಳನ್ನು ಪೂರೈಸುವ ಮಿತಿ ಹೇರಿದೆ. ಇದು ಬೇಡಿಕೆಯ ಶೇ. 5ಕ್ಕಿಂತಲೂ ಕಡಿಮೆ. ಹೋಟೆಲ್ ಉದ್ಯಮವನ್ನು ಆದ್ಯತಾ ವಲಯದಲ್ಲಿ ಗುರುತಿಸಿದ್ದರೂ ಪೂರೈಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನ ಸುಮಾರು 40 ಸಾವಿರ ಹೋಟೆಲ್ಗಳು ಮುಚ್ಚುವ ಬೀತಿಯಲ್ಲಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
6 ಲಕ್ಷ ಕಾರ್ಮಿಕರಿಗೆ ಸಮಸ್ಯೆ
ಹೋಟೆಲ್ ಉದ್ಯಮವು ಬೃಹತ್ ಪೂರೈಕೆ ಸರಪಳಿ ಹೊಂದಿದೆ. ಪ್ರತಿದಿನ 12 ಲಕ್ಷ ಲೀಟರ್ ಹಾಲು, ಟನ್ಗಟ್ಟಲೆ ತರಕಾರಿ ಮತ್ತು ಮಾಂಸವನ್ನು ಖರೀದಿಸುತ್ತವೆ. ಸಿಲಿಂಡರ್ ಕೊರತೆಯಿಂದ ಹೋಟೆಲ್ಗಳು ಬಂದ್ ಆದರೆ ರೈತರು ಮತ್ತು ಇತರ ಕಾರ್ಮಿಕರಿಗೂ ನಷ್ಟ ಉಂಟಾಗಲಿದೆ. ಅಂದಾಜು 6 ಲಕ್ಷ ಕಾರ್ಮಿಕರ ಉದ್ಯೋಗಕ್ಕೆ ಇದು ಸಮಸ್ಯೆ ಉಂಟು ಮಾಡಲಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಶ್ರೀಘ್ರ ಪರಿಹಾರ ಅನಿವಾರ್ಯ
ಬೆಂಗಳೂರು ನಗರವೊಂದಕ್ಕೆ ದಿನಕ್ಕೆ ಸಾವಿರಾರು ಸಿಲಿಂಡರ್ಗಳ ಅಗತ್ಯವಿದೆ. ಆದರೆ, ಇಡೀ ರಾಜ್ಯದ ಹೋಟೆಲ್ಗಳಿಗೆ ಸಾವಿರ ಸಿಲಿಂಡರ್ ನಿಗದಿ ಮಾಡಲಾಗಿದೆ. ಈ ಬಿಕ್ಕಟ್ಟು ಬಗೆಹರಿಯದಿದ್ದರೆ ದರ ಏರಿಕೆ ಅಥವಾ ಅರ್ನಿದಿಷ್ಟಾವಧಿಗೆ ಮುಚ್ಚುವಿಕೆ ಅನಿವಾರ್ಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.