- 3 ತಿಂಗಳೊಳಗೆ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- ಇದುವರೆಗೆ ರೂಪಿಸದಕ್ಕೆ ಅಸಮಾಧಾನ
- ನೇಮಕಕ್ಕೆ ಮಾನದಂಡದ ಕೊರತೆ
ಬೆಂಗಳೂರು: ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಹಾಗೂ ನೇಮಕಾತಿಗಾಗಿ ಮೂರು ತಿಂಗಳೊಳಗೆ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶ ದೇವಾನಂದ ಪುತ್ತಪ್ಪ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್.ಕಿನಗಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಒಂದೇ ಹುದ್ದೆಗೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಾಗ, ಆಯ್ಕೆಗಾಗಿ ನಿಗದಿತ ವಿಧಾನ ಅಥವಾ ಮಾರ್ಗಸೂಚಿ ಇಲ್ಲದಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇದ್ದರೂ, ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಯಾವುದೇ ವಿಧಾನವನ್ನು ಸರ್ಕಾರ ನಿಗದಿ ಮಾಡಿಲ್ಲ. ಇದು ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶದ ಮೂಲಭೂತ ಹಕ್ಕಿನ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಮಾನದಂಡದ ಕೊರತೆ:
2011ರ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಅಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯವು ಅಧ್ಯಕ್ಷ, ಇಬ್ಬರು ನ್ಯಾಯಾಂಗ ಸದಸ್ಯರು ಮತ್ತು ಇಬ್ಬರು ಕಂದಾಯ ಸದಸ್ಯರನ್ನು ಒಳಗೊಂಡಿರುತ್ತದೆ. ಆದರೆ, ಈ ಮೂಲಭೂತ ಅರ್ಹತೆಗಳನ್ನು ಹೊರತುಪಡಿಸಿ, ಕಾಯ್ದೆಯು ಆಯ್ಕೆ ಮಾನದಂಡ ಅಥವಾ ಪ್ರಕ್ರಿಯೆಯನ್ನು ವಿವರಿಸಿಲ್ಲ. ಇದು ಸಂವಿಧಾನದ ಸಮಾನತೆಯ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.