R. Rudresh 
ರಾಜ್ಯ

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್​ ಕೊಲೆ ಆರೋಪಿಗೆ ಜಾಮೀನು ನಿರಾಕರಣೆ| High court

ಪ್ರಮುಖ ಮುಖ್ಯಾಂಶಗಳು

  • ಪಲಾಯನದ ಆತಂಕ ವ್ಯಕ್ತಪಡಿಸಿದ ಎನ್​ಐಎ
  • ಗಂಂಭೀರತೆ ಪರಿಗಣಿಸಿದ ಹೈಕೋರ್ಟ್​
ಬೆಂಗಳೂರು: ಆರೆಸ್ಸೆಸ್​ ಕಾರ್ಯಕರ್ತ ಆರ್​. ರುದ್ರೇಶ್​ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್​ ಪಾಷಾ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಪ್ರಕರಣದ ವಿಚಾರಣೆಯು ಅಂತಿಮ ಹಂತದಲ್ಲಿರುವುದರಿಂದ ಮತ್ತು ಆರೋಪದ ಗಂಭೀರತೆಯನ್ನು ಪರಿಗಣಿಸಿ, ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯು ಕಳೆದ ಒಂಬತ್ತು ವರ್ಷ ಆರು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದು, ಮೃತಪಟ್ಟ ತನ್ನ ಸಹೋದರಿಯ ಅಂತಿಮ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಮನವಿಯನ್ನು ಎನ್​ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಚಿನ್​ ಶಂಕರ್​ ಮಗದಮ್​ ಮತ್ತು ಕೆ. ರಾಜೇಶ್​ ರೈ ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿದೆ.
ಮೃಪಟ್ಟ ಸಹೋದರಿಯ 10ನೇ ಮತ್ತು 13ನೇ ದಿನದ ಕಾರ್ಯಕ್ರಮಗಳಿಗೆ ಹಾಜರಾಗಲು ಆರೋಪಿಗೆ ಅವಕಾಶ ನೀಡಲಾಗಿದೆ. ಈಗ ಮತ್ತೆ ಆದೇ ಉದ್ದೇಶಕ್ಕೆ 40ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಾಮೀನು ನೀಡುವುದು ಸೂಕ್ತವಲ್ಲ. ಅಲ್ಲದೆ, ಕುಟುಂಬದಲ್ಲಿ ಇತರ ಪುರುಷರು ಇರುವುದರಿಂದ ವಿಧಿವಿಧಾನಗಳನ್ನು ಅವರು ನೆರವೇರಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಆರೋಪಿಯ ಮೇಲೆ ಕೊಲೆ, ಸಾಕ್ಷ್ಯ ನಾಶ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಗಂಭೀರ ಆರೋಪಗಳಿವೆ. ಪ್ರಕರಣದ ವಿಚಾರಣೆ ಹಂತಿಮ ಹಂತದಲ್ಲಿರುವಾಗ ಜಾಮೀನು ನೀಡಿದರೆ ಪಲಾಯನ ಮಾಡುವ ಅಥವ ವಿಚಾರಣೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂಬ ಪ್ರಾಸಿಕ್ಯೂಷನ್​ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

ಪ್ರಕರಣದ ಹಿನ್ನಲೆ: 

ಆರೆಸ್ಸೆಸ್​ ಕಾರ್ಯಕರ್ತ ಆರ್​. ರುದ್ರೇಶ್​ ಅವರು ಶಿವಾಜಿನಗರದಲ್ಲಿ ನಡೆದ ಪಥಸಂಚಲನವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಯಾದ ಕೆಲ ದಿನಗಳ ನಂತರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಇರ್ಫಾನ್​ ಪಾಷಾನನ್ನು ಎ1 ಆರೋಪಿ ಎಂದು ಗುರುತಿಸಲಾಗಿದೆ. ಈ ಪ್ರಕರಣವು ಕೋಮು ಸೂಕ್ಷ್ಮತೆ ಹೊಂದಿದ್ದರಿಂದ ಮತ್ತು ಭಯೋತ್ಪಾದನೆಯ ಶಂಕೆ ಇದ್ದ ಕಾಋಣ ತನಿಖೆಯನ್ನು ಎನ್​ಐಎಗೆ ವಹಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಪ್ರಕರಣದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದು, ಎನ್​ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದೆ. #high court